ಶ್ರೀಲಂಕಾ ಬಾಂಬ್ ದಾಳಿ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ!
ಶ್ರೀಲಂಕಾದಲ್ಲಿ ನಡೆದ ಸರಣಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಈ ವರೆಗೂ ಸುಮಾರು 320ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಸೈರೋ: ಶ್ರೀಲಂಕಾದಲ್ಲಿ ಭಾನುವಾರ ನಡೆದ ಭೀಕರ ಬಾಂಬ್ ದಾಳಿಯ ಸಂಪೂರ್ಣ ಹೊಣೆಯನ್ನು ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದೆ. ಆದರೆ ಈ ಕೃತ್ಯಕ್ಕೆ ಸಂಘಟನೆಯು ಯಾವುದೇ ಸಾಕ್ಷ್ಯ ಒದಗಿಸಿಲ್ಲ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭಾನುವಾರ ಈಸ್ಟರ್ ಸಂಡೆ ನಿಮಿತ್ತ ಕೊಲಂಬೋ ಚರ್ಚ್ ಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದ ನೂರಾರು ಅಮಾಯಕ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು ನಡೆಸಿದ ಸರಣಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಈ ವರೆಗೂ ಸುಮಾರು 320ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಕರ್ನಾಟಕದ 5 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಇಸ್ಲಾಮಿಕ್ ಸಂಘಟನೆ ಘಟನೆಯ ಹೊಣೆ ಹೊತ್ತ ವರದಿಗೂ ಮುನ್ನ, ನ್ಯೂಜಿಲೆಂಡ್ ನಲ್ಲಿ ಮಸೀದಿಗಳ ಮೇಲೆ ಇತ್ತೀಚೆಗೆ ನಡೆದ ದಾಳಿಯ ಪ್ರತೀಕಾರ ರೂಪವಾಗಿ ಕೊಲಂಬೋ, ನೆಗೊಂಬೋದಲ್ಲಿನ ಚರ್ಚ್, ಹೋಟೆಲ್ ಗಳಲ್ಲಿ ಬಾಂಬ್ ಸ್ಫೋಟ ನಡೆಸಲಾಗಿದೆ ಎರಡು ಸ್ಥಳೀಯ ಇಸ್ಲಾಮಿಕ್ ಉಗ್ರ ಸಂಘಟನೆಗಳು ಕೃತ್ಯ ಎಸಗಿವೆ ಎಂದು ಶ್ರೀಲಂಕಾದ ರಕ್ಷಣಾ ಸಚಿವ ರುವಾನ್ ವಿಜೆವರ್ಧೆನ್ ಹೇಳಿದ್ದರು.
ಅಲ್ಲದೆ, ಈ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಹಾಲ್ ಮಾರ್ಕ್ ಇದ್ದುದು ಕಂಡುಬಂದಿದೆ. ಆದರೆ ಇದುವರೆಗೂ ಅವರು ದಾಳಿಯ ಹೊಣೆ ಹೊತ್ತಿಲ್ಲ ಎಂದು ಯುಎಸ್ ಗುಪ್ತಚರ ಮೂಲಗಳು ತಿಳಿಸಿದ್ದವು.