ಸಿಯೋಲ್: ಪ್ರಪಂಚಕ್ಕೆ ಯುದ್ಧ ಭೀತಿ ಸೃಷ್ಟಿಸಿದ್ದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿರುದ್ಧ ಹಬ್ಬಿದ್ದ ವದಂತಿಗೆ ತೆರೆಬಿದ್ದಿದೆ. ಇತ್ತೀಚೆಗೆ ಕಿಮ್ ಜಾಂಗ್ ಉನ್ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಬಹಳ ದಟ್ಟವಾಗಿ‌ ಹರಡಿತ್ತು. ಅವರ ಸಾವಿನ ವಿಷಯವನ್ನು ಮುಚ್ಚಿಡಲಾಗಿದೆ ಎಂಬ ಹೇಳಲಾಗುತ್ತಿತ್ತು. ಆದರೀಗ ಕಿಮ್ ಜಾಂಗ್ ಉನ್ ಆರೋಗ್ಯವಾಗಿದ್ದಾರೆ ಎಂದು ದಕ್ಷಿಣ ಕೊರಿಯಾ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

ಅಲ್ಲದೆ ಸ್ವತಃ ಕಿಮ್ ಜಾಂಗ್ ಉನ್ ಬಹಳ‌ ದಿನಗಳ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಳ್ಳುವ ಮೂಲಕ ತಾವು ಸಾವನ್ನಪ್ಪಿರಬಹುದೆಂದು ಹಬ್ಬಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.ಕಿಮ್ ಜಾಂಗ್ ಉನ್ ಕಳೆದ ಕೆಲ ದಿನಗಳಿಂದ  ಬಹಿರಂಗವಾಗಿ ಯಾವುದೇ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದರಿಂದ ಅವರಿಗೆ ಕೊರೋನಾ ಸೋಂಕು ಹರಡಿರಬಹುದು, ಅಥವಾ ಬೇರಾವುದೋ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ ಇರಬಹುದು, ಸಾವನ್ನಪ್ಪಿರಲೂ ಬಹುದು ಎಂಬ ನಾನಾ ರೀತಿಯ ವದಂತಿಗಳು ಹುಟ್ಟಿಕೊಂಡಿದ್ದವು. ಕಿಮ್ ಜಾಂಗ್ ಉನ್ (Kim Jong Un) ಇತ್ತೀಚಿಗೆ  ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚೀನಾ ವೈದ್ಯರು ಕಿಮ್ ಜಾಂಗ್ ಉನ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. ಆ ವೈದ್ಯರೊಬ್ಬರಿಂದಲೇ ಕಿಮ್ ಜಾಂಗ್ ಉನ್ ಅವರಿಗೆ ಕೊರೋನಾ ಸೋಂಕು ಹರಡಿರಬಹುದು ಎಂಬ ಬಲವಾದ ವದಂತಿ ಕೇಳಿಬಂದಿತ್ತು.  ಖುದ್ದು ಚೀನಾ ದೇಶದ ಕೆಲವು ವಾಹಿನಿಗಳೇ ಅಂಥಾ ಸುದ್ದಿ ಬಿತ್ತರಿಸಿದ್ದವು. ಇದರಿಂದ ಪ್ರಪಂಚದ ಇತರೆ ಭಾಗಗಳಲ್ಲೂ ಗಾಳಿ ಸುದ್ದಿ ಹರಡಿತ್ತು.


ಉತ್ತರ ಕೊರಿಯಾದ ಕಿಮ್ ಜೊಂಗ್-ಯುನ್ ನ ಐಷಾರಾಮಿ ಜೀವನಶೈಲಿಯ 10 ಅಂಶಗಳು


ವಿಶೇಷ ಎಂದರೆ ಇಷ್ಟು ದೊಡ್ಡ ಮಟ್ಟದಲ್ಲಿ ವದಂತಿ ಹರಡುತ್ತಿದ್ದರೂ ಕಿಮ್ ಜಾಂಗ್ ಉನ್ ಅವರಾಗಲಿ, ಅವರ ಕಚೇರಿ ವತಿಯಿಂದಾಗಲಿ, ಸರ್ಕಾರದ ವತಿಯಿಂದಾಗಲಿ ಯಾವುದೇ ಸ್ಪಷ್ಟೀಕರಣಗಳು ಬಂದಿರಲಿಲ್ಲ. ಇದು ವದಂತಿಗಳಿಗೆ ಪುಷ್ಠಿ ನೀಡಿತ್ತು. 
‌ 
ಇದಲ್ಲದೆ ಇತ್ತರ ಕೊರಿಯಾದ ಪಿತಾಮಹ ಎನಿಸಿಕೊಂಡಿರುವ ಕಿಮ್ ಸಂಗ್ ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಇದೇ ಏಪ್ರಿಲ್ 15ರಂದು ನಡೆದಿತ್ತು. ಪ್ರತಿವರ್ಷ ಕಿಮ್ ಸಂಗ್ ಅವರ  ಜನ್ಮ ದಿನಾಚರಣೆ ಉತ್ತರ ಕೊರಿಯಾಗೆ ಸರ್ಕಾರಿ ರಜೆ ನೀಡಲಾಗುತ್ತದೆ. ಮತ್ತು ತಮ್ಮ ತಾತ ಕಿಮ್ ಸಂಗ್ ಅವರ ಜನ್ಮ ದಿನಾಚರಣೆಯಲ್ಲಿ ಖುದ್ದು ಕಿಮ್ ಜಾಂಗ್ ಭಾಗವಹಿಸುತ್ತಿದ್ದರು. ಆದರೆ ಕಿಮ್ ಸಂಗ್ ಅವರ 108ನೇ ಜನ್ಮ ದಿನಾಚರಣೆ ವೇಳೆ ಕಿಮ್ ಜಾಂಗ್ ಉನ್  ಕಾಣಿಸಿಕೊಳ್ಳಲಿಲ್ಲ. ಯಾವಾಗ ಕಿಮ್ ಜಾಂಗ್ ಉನ್ ತಮ್ಮ ತಾತನ ಜನ್ಮದಿನಾಚರಣೆ ಸಮಾರಂಭದಲ್ಲಿ ಕಾಣಿಸಿಕೊಳ್ಳಲಿಲ್ಲವೋ ಆಗ ಅವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಇನ್ನಷ್ಟು ತೀವ್ರವಾಗಿ ಹರಡಲಾರಂಭಿಸಿತು.


ಈಗ ದಕ್ಷಿಣ ಕೊರಿಯಾದ ಅಧ್ಯಕ್ಷರ ಕಚೇರಿಯ ಅಧಿಕಾರಿಗಳು ಕಿಮ್ ಜಾಂಗ್ ಉನ್ ಬದುಕಿದ್ದಾರೆ, ಅಷ್ಟೇ ಅಲ್ಲ, ಆರೋಗ್ಯವಾಗಿದ್ದಾರೆ. ವಿನಾಕಾರಣ ವದಂತಿಗಳನ್ನು ಹರಡಲಾಗುತ್ತಿದೆ ಎಂದು ಹೇಳಿದ್ದಾರೆ. ಅಧಿಕಾರಿಗಳು ನೀಡಿದ ಸ್ಪಷ್ಟೀಕರಣದಿಂದ ವದಂತಿ ಹರಡುವುದು ನಿಲ್ಲುತ್ತಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಕಿಮ್ ಜಾಂಗ್ ಉನ್ ಸ್ವತಃ ಸ್ಪಷ್ಟೀಕರಣ ನೀಡಿದ್ದಾರೆ‌.


ಇಂದು ಉತ್ತರ ಕೊರಿಯಾದ ಕೆಸಿಎನ್​ಎ ಫರ್ಟಿಲೈಸರ್ ಫ್ಯಾಕ್ಟರಿಯನ್ನು ಉದ್ಘಾಟನೆ ಮಾಡುವ ಮೂಲಕ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಏ. 11ರಂದು ವರ್ಕರ್ಸ್​ ಪಾರ್ಟಿ ಸಭೆಯಲ್ಲಿ ಕಾಣಿಸಿಕೊಂಡ ಬಳಿಕ ಇನ್ನೆಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಕೊರಿಯಾದ ಬೃಹತ್ ಸಮಾರಂಭವೊಂದರಲ್ಲಿ ಭಾಗವಹಿಸಿ ಉದ್ಘಾಟನಾ ಕಾರ್ಯಕ್ರಮ‌ ನೆರವೇರಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಹೀಗೆ ಬಹಿರಂಗವಾಗಿ ಕಾಣಿಸಿಕೊಳ್ಳುವ ಮೂಲಕ ವದಂತಿಗಳಿಗೆ ವಿರಾಮ ಹಾಕಲು ಮುಂದಾಗಿದ್ದಾರೆ.