ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆ ರದ್ದು: ಭಾರತಕ್ಕೆ ಜಯ
ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿದ್ದ ಭಾರತದ ನೌಕಾಸೇನೆಯ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಮರಣದಂಡನೆ ರದ್ದುಗೊಳಿಸಿ ಅಂತರಾಷ್ಟ್ರೀಯ ನ್ಯಾಯಾಲಯ ತೀರ್ಪು ನೀಡಿದೆ.
ನವದೆಹಲಿ: ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿದ್ದ ಭಾರತದ ನೌಕಾಸೇನೆಯ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಮರಣದಂಡನೆ ರದ್ದುಗೊಳಿಸಿ ಅಂತರಾಷ್ಟ್ರೀಯ ನ್ಯಾಯಾಲಯ ತೀರ್ಪು ನೀಡಿದೆ.
ಪಾಕಿಸ್ತಾನದಲ್ಲಿ ಇದ್ದುಕೊಂಡು ಭಾರತದ ಪರವಾಗಿ ಬೇಹುಗಾರಿಕೆ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಭಾರತದ ನೌಕಾಸೇನೆಯ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ವಶದಲ್ಲಿಟ್ಟುಕೊಂಡು ಅವರಿಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಅಂತಾರಾಷ್ಟ್ರೀಯ ನ್ಯಾಯಾಲಯ ಪಾಕಿಸ್ತಾನಕ್ಕೆ ಸೂಚನೆ ನೀಡಿದೆ. ಇದು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಜಯ ಸಿಕ್ಕಂತಾಗಿದೆ.
ಪಾಕಿಸ್ತಾನವು ತಮ್ಮ ದೇಶದ ವಿರುದ್ಧ ಬೇಹುಗಾರಿಕೆ ಮಾಡುತ್ತಿದ್ದಾರೆಂದು ಆರೋಪಿಸಿ ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿತ್ತು. ಬಳಿಕ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯ 2017ರಲ್ಲಿ ಮರಣದಂಡನೆಯನ್ನು ಕೂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಪಾಕಿಸ್ತಾನದ ವಿರುದ್ಧ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆಹೋಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಅಂತಾರಾಷ್ಟ್ರೀಯ ನ್ಯಾಯಾಲಯವು ತಾನು ತೀರ್ಪು ನೀಡುವವರೆಗೆ ಪಾಕಿಸ್ತಾನವು ಕುಲಭೂಷಣ್ ಜಾಧವ್ ಮರಣದಂಡನೆ ಶಿಕ್ಷೆಯನ್ನು ಜಾರಿಗೆ ತರಬಾರದು ಎಂಬ ಆದೇಶ ನೀಡಿತ್ತು.
ನೆದರ್ಲೆಂಡ್ನ ಹೇಗ್ ಕೇಂದ್ರ ಕಚೇರಿಯಲ್ಲಿ ಫೆಬ್ರವರಿ ತಿಂಗಳಲ್ಲಿ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸಿದೆ. ಪಾಕಿಸ್ತಾನ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸುವಂತೆ ಆದೇಶಿಸಿದೆ.
ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ನೀಡಿರುವ ಮರಣದಂಡನೆ ಶಿಕ್ಷೆಯನ್ನು ಪುನರ್‌ಪರಿಶೀಲಿಸಬೇಕು ಹಾಗೂ ಜಾಧವ್ ಅವರಿಗೆ ನ್ಯಾಯಯುತವಾಗಿ ಸಿಗಬೇಕಿರುವ ಎಲ್ಲ ರಾಜತಾಂತ್ರಿಕ ನೆರವುಗಳೂ ದೊರೆಯುವಂತಾಗಬೇಕು ಎಂದು ಐಸಿಜೆ ಮುಖ್ಯ ನ್ಯಾಯಮೂರ್ತಿ ಅಬ್ದುಲ್‌ಖಾವಿ ಅಹ್ಮದ್ ಯೂಸುಫ್ ಪಾಕ್‌ಗೆ ನಿರ್ದೇಶಿಸಿದ್ದಾರೆ.
ಪಾಕಿಸ್ತಾನದಿಂದ ವಿಯೆನ್ನಾ ಒಪ್ಪಂದ ಉಲ್ಲಂಘನೆ:
ಪಾಕಿಸ್ತಾನವು ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಹಿನ್ನೆಲೆ ಕುಲಭೂಷಣ್ ಜಾಧವ್‌ಗೆ ನೀಡಿದ್ದ ಗಲ್ಲುಶಿಕ್ಷೆಯನ್ನು ರದ್ದುಗೊಳಿಸಿದೆ. ಈ ಪ್ರಕರಣದಲ್ಲಿ ಪಾಕಿಸ್ತಾನ 1963ರ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ. ಕುಲಭೂಷಣ್ ಜಾಧವ್ ಓರ್ವ ಉದ್ಯಮಿ. ಅವರನ್ನು ಇರಾನ್ನಿಂದ ಅಪಹರಣ ಮಾಡಲಾಗಿದೆ ಎಂದು ಭಾರತ ಪರ ವಕೀಲ ಹರೀಶ್ ಸಾಳ್ವೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ, ಕುಲಭೂಷಣ್ ಜಾಧವ್ ಉದ್ಯಮಿಯಲ್ಲ. ಉದ್ಯಮಿ ಎಂದು ಹೇಳಿಕೊಂಡು ಗೂಢಚಾರಿಕೆ ನಡೆಸಿದ್ದಾರೆ ಎಂದು ಹೇಳಿತ್ತು. ಅಲ್ಲದೆ, ಕುಲಭೂಷಣ್ ಜಾಧವ್‌ಗೆ ಭಾರತದ ರಾಯಭಾರ ಕಚೇರಿ ನೆರವು ನೀಡಲು ಅವಕಾಶ ನೀಡಬೇಕು ಎಂದು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮಾಡಿದ್ದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿತ್ತು.
2017ರ ಡಿಸೆಂಬರ್ನಲ್ಲಿ ಕುಲಭೂಷಣ್ ಜಾಧವ್ ತಮ್ಮ ಪತ್ನಿ ಮತ್ತು ತಾಯಿಯನ್ನು ಭೇಟಿಯಾಗಲು ಬಯಸಿದ್ದರು. ಇದಕ್ಕೆ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಅನುಮತಿ ನೀಡಿತ್ತು. ಇಸ್ಲಾಮಾಬಾದ್ನಲ್ಲಿರುವ ಪಾಕ್ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ ಭೇಟಿಗೆ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 30 ನಿಮಿಷಗಳ ಕಾಲ ಜಾಧವ್, ತಾಯಿ ಮತ್ತು ಪತ್ನಿ ಜೊತೆ ಮಾತುಕತೆ ನಡೆಸಿದ್ದರು. ಆದರೆ, ನೇರವಾಗಿ ಭೇಟಿಗೆ ಅವಕಾಶ ನೀಡದೆ ಗಾಜಿನ ತಡೆಗೋಡೆಯ ಆಚೀಚೆ ಮುಖ ನೋಡಿಕೊಳ್ಳಲು ಅವಕಾಶ ನೀಡಿ ಇಂಟರ್ಕಾಂ ಮೂಲಕ ಮಾತನಾಡಲು ಅವಕಾಶ ಕಲ್ಪಿಸಿದ ಪಾಕಿಸ್ತಾನದ ಧೋರಣೆಗೆ ಭಾರತದಲ್ಲಿ ಖಂಡನೆ ವ್ಯಕ್ತವಾಗಿತ್ತು. ಅಲ್ಲದೆ, ಕುಲಭೂಷಣ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ನಡೆದಿದ್ದವು.
ಈ ಐತಿಹಾಸಿಕ ತೀರ್ಪು ಸತ್ಯ ಮತ್ತು ನ್ಯಾಯಕ್ಕೆ ಸಂದ ಜಯ: ಪ್ರಧಾನಿ ನರೇಂದ್ರ ಮೋದಿ
ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ.ಸತ್ಯ ಮತ್ತು ನ್ಯಾಯ ಮೇಲುಗೈ ಸಾಧಿಸಿದೆ. ವಾಸ್ತವಾಂಶಗಳನ್ನು ವಿಸ್ತೃತವಾಗಿ ಅಧ್ಯಯನ ನಡೆಸಿ ತೀರ್ಪು ನೀಡಿದ್ದಕ್ಕೆ ಐಸಿಜೆಗೆ ಅಭಿನಂದನೆಗಳು. ಕುಲಭೂಷಣ್ ಜಾಧವ್‌ಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ನನಗಿದೆ. ಪ್ರತಿಯೊಬ್ಬ ಭಾರತೀಯನ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಎಂದಿಗೂ ಶ್ರಮಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.