ಇಂಡೋನೇಷ್ಯಾದ ಲಯನ್ ಏರ್ ವಿಮಾನ ಸಮುದ್ರಕ್ಕೆ ಪತನ
ಜಕಾರ್ತಾದಿಂದ ಸುಮಾತ್ರಾ ದ್ವೀಪದ ಪಂಗ್ಕಾಲ್ ಪಿನಂಗ್ ನಗರಕ್ಕೆ ತೆರಳುತ್ತಿದ್ದ ಲಯನ್ ಏರ್ ಪ್ರಯಾಣಿಕ ವಿಮಾನವು ಟೇಕ್ ಆಫ್ ಆದ 13 ನಿಮಿಷಗಳ ಬಳಿಕ ಸಂಪರ್ಕ ಕಳೆದುಕೊಂಡಿತ್ತು.
ಜಕಾರ್ತಾ: ಇಂಡೋನೇಷ್ಯಾದ ಜಕಾರ್ತಾದಿಂದ ಪಂಗ್ಕಾಲ್ ಪಿನಾಂಗ್ ಗೆ ತೆರಳುತ್ತಿದ್ದ ಲಯನ್ ಏರ್ ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಸಮುದ್ರಕ್ಕೆ ಪತನಗೊಂಡ ಘಟನೆ ಸೋಮವಾರ ಬೆಳಿಗ್ಗೆ 7.30ರ ಸಮಯದಲ್ಲಿ ನಡೆದಿದೆ.
ಇಂಡೋನೇಷ್ಯಾ ರಾಜಧಾನಿ ಜಕಾರ್ತಾದಿಂದ ಸುಮಾತ್ರಾ ದ್ವೀಪದ ಪಂಗ್ಕಾಲ್ ಪಿನಂಗ್ ನಗರಕ್ಕೆ ತೆರಳುತ್ತಿದ್ದ ಲಯನ್ ಏರ್ ಪ್ರಯಾಣಿಕ ವಿಮಾನವು ಟೇಕ್ ಆಫ್ ಆದ 13 ನಿಮಿಷಗಳ ಬಳಿಕ ಸಂಪರ್ಕ ಕಳೆದುಕೊಂಡಿತ್ತು. ಬಳಿಕ ಸಮುದ್ರಕ್ಕೆ ಪತನಗೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ ಎಂದು ಇಂಡೋನೇಷಿಯನ್ ವಿಮಾನಯಾನ ಪ್ರಾಧಿಕಾರ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 189 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಲಯನ್ ಏರ್'ನ JT610 ವಿಮಾನ ಬೆಳಿಗ್ಗೆ 6.20 ಕ್ಕೆ ಹೊರಟು ಬಂಗ್ಕಾ-ಬೆಲಿಟಂಗ್ ಟಿನ್ ಮೈನಿಂಗ್ ಹ್ಯಾಬ್ ನಲ್ಲಿ 7.20 ಎ.ಎಂ.ಗೆ ಇಳಿಯಬೇಕಿತ್ತು ಎಂದು ಟ್ರ್ಯಾಕಿಂಗ್ ಸೇವೆ ತೋರಿಸಿದೆ. ಆದರೆ ವಿಮಾನದಲ್ಲಿ ಎಷ್ಟು ಜನ ಪ್ರಯಾಣಿಸುತ್ತಿದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ. ನಾವು ಎಲ್ಲಾ ಮಾಹಿತಿಯನ್ನು ಮತ್ತು ಡೇಟಾವನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಲಯನ್ ಏರ್ ಗ್ರೂಪ್ ಮುಖ್ಯ ಕಾರ್ಯನಿರ್ವಾಹಕ ಎಡ್ವರ್ಡ್ ಸಿರೈಟ್ ಹೇಳಿದ್ದಾರೆ.