ಟರ್ಕಿಯ ಕಲ್ಲಿದ್ದಲು ಗಣಿಯಲ್ಲಿ ಭಾರೀ ಸ್ಫೋಟ; 14 ಕಾರ್ಮಿಕರ ಸಾವು, 49 ಮಂದಿ ಸಿಲುಕಿರುವ ಶಂಕೆ!

ಟರ್ಕಿಯಲ್ಲಿ ಕಲ್ಲಿದ್ದಲು ಗಣಿ ಸ್ಫೋಟದಿಂದಾಗಿ ದೊಡ್ಡ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ 14 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಇನ್ನೂ ಹತ್ತಾರು ಮಂದಿ ಗಣಿಯಲ್ಲಿ ಸಿಲುಕಿಕೊಂಡಿದ್ದಾರೆ.
ನವದೆಹಲಿ: ಟರ್ಕಿಯ ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ 14 ಜನರು ಸಾವನ್ನಪ್ಪಿದ್ದರೆ, 28ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನೂ ಹಲವು ಮಂದಿ ಗಣಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಬಾರ್ಟಿನ್ ಪ್ರಾಂತ್ಯದ ಅಮ್ಸಾರಾ ನಗರದ ಗಣಿಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳನ್ನು ರವಾನಿಸಲಾಗಿದೆ ಎಂದು ಟರ್ಕಿಯ ವಿಪತ್ತು ನಿರ್ವಹಣಾ ಸಂಸ್ಥೆ AFAD ಹೇಳಿದೆ. ಒಟ್ಟು 49 ಜನರು ಇನ್ನೂ ಗಣಿಯಲ್ಲಿ ಸಿಲುಕಿದ್ದಾರೆ ಎಂದು ಬಾರ್ಟಿನ್ ಪ್ರಾಂತ್ಯದ ಗವರ್ನರ್ ನರ್ತಕ್ ಅರ್ಸ್ಲಾನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನೈಸರ್ಗಿಕ ವಿಕೋಪದಿಂದಾಗಿ ಚೀನಾದಲ್ಲಿ ಕನಿಷ್ಠ 792 ಜನರು ಸಾವು
ಕಲ್ಲಿದ್ದಲು ಗಣಿ ಸ್ಫೋಟ
ಬಾರ್ಟಿನ್ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ 110 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇದೇ ಸಮಯದಲ್ಲಿ ಅಲ್ಲಿ ಸ್ಫೋಟ ಸಂಭವಿಸಿದೆ ಎಂದು ಟರ್ಕಿಯ ಆಂತರಿಕ ಸಚಿವ ಸುಲೇಮಾನ್ ಸೊಯ್ಲು ಹೇಳಿದ್ದಾರೆ. ಈ ಕಲ್ಲಿದ್ದಲು ಗಣಿ ಸ್ಫೋಟದಲ್ಲಿ 14 ಕಾರ್ಮಿಕರು ಸಾವನ್ನಪ್ಪಿದ್ದರೆ, ಗಾಯಗೊಂಡ 21 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಗಣಿಯಲ್ಲಿ ಸಿಕ್ಕಿಬಿದ್ದಿರುವ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ.
ಗಣಿ ಆಳದಲ್ಲಿ ಕಾರ್ಮಿಕರ ಕೆಲಸ
‘ಪ್ರಾಥಮಿಕ ಮೂಲಗಳ ಪ್ರಕಾರ ಇದು ಬೆಂಕಿಯಿಂದಾಗಿರುವ ಸ್ಫೋಟವೆಂದು ತಿಳಿದುಬಂದಿದೆ. ಕಾರ್ಮಿಕರು ಗಣಿ ಆಳದಲ್ಲಿ ಕೆಲಸ ಮಾಡುತ್ತಿದ್ದರು. ಸ್ಫೋಟ ಸಂಭವಿಸಿದ ತಕ್ಷಣ, ಒಳಗೆ ಬೆಂಕಿ ಕಾಣಿಸಿಕೊಂಡಿತು ಮತ್ತು ಗಣಿಯ ಕೆಲವು ಭಾಗ ಕುಸಿಯಿತು. ಪರಿಣಾಮ ಅನೇಕ ಕಾರ್ಮಿಕರು ಒಳಗೆ ಸಿಲುಕಿಕೊಂಡರು. ಗಾಯಗೊಂಡ ಕಾರ್ಮಿಕರನ್ನು ಸ್ಥಳಾಂತರಿಸಲು ರಕ್ಷಣಾ ಮತ್ತು ಪರಿಹಾರ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಈ ಘಟನೆಯಲ್ಲಿ ಮೃತಪಟ್ಟವರ ಬಗ್ಗೆ ನಮ್ಮ ಸರ್ಕಾರ ದುಃಖಿತವಾಗಿದೆ ಎಂದು ಟರ್ಕಿಯ ಇಂಧನ ಸಚಿವ ಫಾತಿಹ್ ಡೊನ್ಮೆಜ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ ಮತ್ತು ಚೀನಾ ರಷ್ಯಾದ ಆತ್ಮೀಯ ರಾಷ್ಟ್ರಗಳು ಎಂದ ಪುಟಿನ್
ಟರ್ಕಿ ಅಧ್ಯಕ್ಷರಿಂದ ಪ್ರಕರಣದ ಮೇಲ್ವಿಚಾರಣೆ
ಗಣಿಯಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಅಕ್ಕಪಕ್ಕದ ಜಿಲ್ಲೆಗಳಿಂದಲೂ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕರೆಸಲಾಗಿದೆ ಎಂದು ಇಂಧನ ಸಚಿವರು ತಿಳಿಸಿದ್ದಾರೆ. ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಸ್ವತಃ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಟರ್ಕಿಯ ಇತಿಹಾಸದಲ್ಲಿ ಗಣಿ ಸ್ಫೋಟದ ಹಲವು ಪ್ರಮುಖ ಘಟನೆಗಳು ನಡೆದಿವೆ. 2014ರಲ್ಲಿ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ 301 ಕಾರ್ಮಿಕರು ಬೆಂಕಿಗೆ ಆಹುತಿಯಾಗಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.