ಮೈಕ್ರೋಸಾಫ್ಟ್: ಮಾಹಿತಿ ತಂತ್ರಜ್ಞಾನದ ದೈತ್ಯ ಕಂಪನಿಯಾಗಿರುವ ಮೈಕ್ರೋಸಾಫ್ಟ್ ಬುಧವಾರ ಪ್ಯಾಚ್ ವೊಂದನ್ನು ಬಿಡುಗಡೆಗೊಳಿಸಿದ್ದು, ತನ್ನ ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಬಳಕೆದಾರರಿಗೆ ಎಚ್ಚರಿಕೆಯೊಂದನ್ನು ರವಾನಿಸಿದೆ. ಹೌದು, 14 ಜನವರಿ, 2020ರ ಬಳಿಕ ಮೈಕ್ರೋಸಾಫ್ಟ್ ತನ್ನ ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಪಿಸಿಗಳಿಗೆ ಸಪೋರ್ಟ್ ನಿಲ್ಲಿಸಲಿದೆ ಎಂದು ಪ್ರಕಟಿಸಿದೆ. 2009ರಲ್ಲಿ ಮೊಟ್ಟಮೊದಲ ಬಾರಿಗೆ ವಿಂಡೋಸ್ 7 ಬಿಡುಗಡೆಗೊಂಡಿತ್ತು . 10 ವರ್ಷಗಳ ಸುದೀರ್ಘ ಅವಧಿಯ ನಂತರ ಕಂಪನಿ ತನ್ನ ಈ ಬೆಂಬಲ ಸೇವೆ ಸ್ಥಗಿತಗೊಳಿಸಲಿದೆ.


COMMERCIAL BREAK
SCROLL TO CONTINUE READING

ಇಂದಿಗೂ ಸಹ ಭಾರತದಲ್ಲಿ ಶೇ.40ಕ್ಕೂ ಅಧಿಕ ಗಣಕಯಂತ್ರಗಳು ವಿಂಡೋಸ್ 7 ಚಾಲಿತವಾಗಿದ್ದು, ಸೈಬರ್ ಸೆಕ್ಯೂರಿಟಿ ದೃಷ್ಟಿಯಿಂದ ಮತ್ತು ನಿಮ್ಮ ಕಂಪ್ಯೂಟರ್ ಅನ್ನು ಅನಿರೀಕ್ಷಿತ ವೈರಸ್ ದಾಳಿಯಿಂದ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದ್ದು, ನಿಮ್ಮ ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್ ಗೆ ಮೈಕ್ರೋಸಾಫ್ಟ್ ಸಪೋರ್ಟ್ ಅಲಭ್ಯವಾಗಲಿದೆ.


ನಿಮ್ಮ ವಿಂಡೋಸ್ -7 ಆಪರೇಟಿಂಗ್ ಸಿಸ್ಟಂಗೆ ಬೆಂಬಲ ಸ್ಥಗಿತಗೊಂಡರೂ ಕೂಡ ನೀವು ಎಂದಿನಂತೆ ನಿಮ್ಮ ಕಂಪ್ಯೂಟರ್ ಬಳಸಬಹುದಾಗಿದೆ . ಆದರೆ, ಒಂದು ವೇಳೆ ಯಾವುದೇ ತಾಂತ್ರಿಕ ಅಡಚಣೆ ಎದುರಾದಲ್ಲಿ ಮೈಕ್ರೊಸಾಫ್ಟ್ ಅದನ್ನು ನಿವಾರಿಸಲು ಅಥವಾ ಎದುರಿಸಲು ನಿಮಗೆ ಯಾವುದೇ ರೀತಿಯ ತಾಂತ್ರಿಕ ಸಪೋರ್ಟ್ ನೀಡುವುದಿಲ್ಲ. ಒಂದು ವೇಳೆ ನೀವು ಜನವರಿ 14ರ ನಂತರವೂ ಕೂಡ ನಿಮ್ಮ ಸಾಫ್ಟ್ ವೇರ್ ಮತ್ತು ಅದರ ಸೆಕ್ಯೂರಿಟಿ ಪ್ಯಾಚ್ ಅಪ್ಡೇಟ್ ಮಾಡದೆ ಹೋದಲ್ಲಿ ನಿಮ್ಮ ಕಂಪ್ಯೂಟರ್ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ.


ನಿಮ್ಮ ಬಳಿ ಹಳೆ ಸಿಸ್ಟಮ್ ಇದ್ದು, ಅದರಲ್ಲಿ ನೀವು ನಿಮ್ಮ ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಮಾಡಲು ಹೋದರೆ, ಸೂಕ್ತ ಹಾರ್ಡ್ ವೇರ್ಸ್ ಸಪೋರ್ಟ್ ಸಿಗದ ಕಾರಣ ನೂತನ ವಿಂಡೋಸ್ 10 ಹೊಂದಿಕೆಯಾಗಲಾರದು. ಹೀಗಾಗಿ ನಿಮಗೆ ಹೊಸ ಕಂಪ್ಯೂಟರ್ ಖರೀದಿಸುವ ಅನಿವಾರ್ಯತೆ ಎದುರಾಗಬಹುದು. ಒಂದು ವೇಳೆ ನಿಮ್ಮ ಬಳಿ ವಿಂಡೋಸ್ 10 ಗೆ ಸಪೋರ್ಟ್ ಮಾಡುವ ಪಿಸಿ ಇದ್ದರೆ ಮತ್ತು ನೀವು ಪೈರೆಟೆಡ್ ವಿಂಡೋಸ್ 7 ಬಳಸುತ್ತಿದ್ದರೆ, ವಿಂಡೋಸ್ 10 ಅಪ್ಡೇಟ್ ಗೆ ಅಡಚಣೆ ಉಂಟಾಗಬಹುದು. ನಿಮ್ಮ ಬಳಿ ಲೈಸನ್ಸ್ ಇರುವ ಮೂಲ ವಿಂಡೋಸ್ ಸಿಸ್ಟಮ್ ಇದ್ದರೆ, ಅದನ್ನು ನೀವು ವಿಂಡೋಸ್ 10ಗೆ ಅಪ್ಗ್ರೇಡ್ ಮಾಡಿಕೊಳ್ಳಬಹುದು. ಹೊಸ ವಿಂಡೋಸ್ 10 ಲೈಸನ್ಸ್ ಖರೀದಿಗೆ ಸುಮಾರು 8-10 ಸಾವಿರ ವೆಚ್ಚವಾಗುವ ಸಾಧ್ಯತೆ ಇದೆ.