ಪಾಕಿಸ್ತಾನದಲ್ಲಿ ಪೆಟ್ರೋಲ್ಗಿಂತಲೂ ದುಬಾರಿಯಾದ ಹಾಲು; 1 ಲೀಟರ್ ಹಾಲಿನ ದರ ಎಷ್ಟು?
ವಿಶೇಷವೆಂದರೆ, ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹಾಲಿನ ದರಕ್ಕಿಂತ ಕಡಿಮೆಯಾಗಿದೆ.
ಕರಾಚಿ: ಮೊಹರಂ ಆಚರಣೆ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಹಾಲಿನ ದರ ಗಗನಕ್ಕೇರಿದೆ ಎಂದು ಪಾಕಿಸ್ತಾನದ ಮಾಧ್ಯಮ ವರದಿಗಳು ತಿಳಿಸಿವೆ. ಕರಾಚಿ ಮತ್ತು ಸಿಂಧ್ ಪ್ರಾಂತ್ಯದಲ್ಲಿ ಹಾಲಿನ ಬೆಲೆ ಲೀಟರ್‌ಗೆ 140 ರೂ. ತಲುಪಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ವಿಶೇಷವೆಂದರೆ, ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹಾಲಿನ ದರಕ್ಕಿಂತ ಕಡಿಮೆಯಾಗಿದೆ. ಎರಡು ದಿನಗಳ ಹಿಂದೆ ಪಾಕಿಸ್ತಾನದಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 113 ರೂ., ಪಾಕಿಸ್ತಾನದಲ್ಲಿ ಡೀಸೆಲ್ ಲೀಟರ್‌ಗೆ 91 ರೂ. ಆದರೆ, ಸಿಂಧ್‌ನ ಕೆಲವು ಭಾಗಗಳಲ್ಲಿ ಹಾಲು ಲೀಟರ್‌ಗೆ 140 ರೂ.ಗೆ ಮಾರಾಟವಾಗುತ್ತಿದೆ ಎಂಬ ವರದಿಗಳು ಬಂದಿವೆ.
"ಬೇಡಿಕೆಯ ತೀವ್ರ ಹೆಚ್ಚಳದಿಂದಾಗಿ ಕರಾಚಿ ನಗರದಾದ್ಯಂತ ಹಾಲು 120 ರಿಂದ 140 ರೂ.ಗಳವರೆಗೆ ಮಾರಾಟವಾಗುತ್ತಿದೆ" ಎಂದು ಅಂಗಡಿ ಮಾಲೀಕರೊಬ್ಬರು ತಿಳಿಸಿದ್ದಾರೆ.
ಮೊಹರಂ ಕಾರಣದಿಂದಾಗಿ ಹಾಲು ದುಬಾರಿ:
ಮೊಹರಂ ಸಮಯದಲ್ಲಿ, ಪವಿತ್ರ ತಿಂಗಳ ಮೆರವಣಿಗೆಯಲ್ಲಿ ಭಾಗವಹಿಸುವವರಿಗೆ ಹಾಲು, ರಸ ಮತ್ತು ತಣ್ಣೀರನ್ನು ನೀಡಲು ನಗರದ ವಿವಿಧ ಭಾಗಗಳಲ್ಲಿ ಸಬೀಲ್ಸ್ (ಸ್ಟಾಲ್‌ಗಳು) ಸ್ಥಾಪಿಸಲಾಗಿದೆ. ಇದಕ್ಕಾಗಿ ಹಾಲಿಗೆ ಭಾರಿ ಬೇಡಿಕೆ ಇದೆ. ಹೆಚ್ಚಿದ ಬೇಡಿಕೆಯಿಂದಾಗಿ, ಹಾಲಿನ ಬೆಲೆ ಏರಿಕೆಯಾಗಿದೆ ಎಂದು ಹೇಳಲಾಗಿದೆ.
"ನಾವು ಪ್ರತಿವರ್ಷ ಹಾಲು ಸಬೀಲ್ ಅನ್ನು ಸ್ಥಾಪಿಸುತ್ತೇವೆ. ಹಾಲಿನ ಬೆಲೆ ಏರಿಕೆಯಿಂದಾಗಿ ಈ ವರ್ಷ ಅದನ್ನು ಸ್ಥಗಿತಗೊಳಿಸಲು ನಾವು ಇಷ್ಟಪಡುವುದಿಲ್ಲ" ಎಂದು ಸಬೀಲ್ ಸ್ಥಾಪಿಸಿದ ನಿವಾಸಿಯೊಬ್ಬರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಜೀವಿತಾವಧಿಯಲ್ಲಿ ಎಂದಿಗೂ ಅಂತಹ ವಿಪರೀತ ಬೆಲೆ ಏರಿಕೆಯನ್ನು ಕಂಡಿಲ್ಲ ಎಂದು ಹೇಳಿದರು.
ಹಾಲಿನ ಬೆಲೆಯನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊಂದಿರುವ ಕರಾಚಿ ಆಯುಕ್ತ ಇಫ್ತಿಖರ್ ಶಲ್ವಾನಿ ಅವರು ದುಬಾರಿ ಬೆಲೆಗೆ ಹಾಲು ಮಾರಾಟವಾಗುತ್ತಿದ್ದರೂ ಅದರ ನಿಯಂತ್ರಣಕ್ಕಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಗಳು ತಿಳಿಸಿವೆ. ವಿಪರ್ಯಾಸವೆಂದರೆ, ಆಯುಕ್ತರ ಕಚೇರಿ ನಿಗದಿಪಡಿಸಿದ ಹಾಲಿನ ಅಧಿಕೃತ ಬೆಲೆ ಲೀಟರ್‌ಗೆ 94 ರೂ. ಎನ್ನಲಾಗಿದೆ.