ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪ, ಸುನಾಮಿಗೆ ಜನಜೀವನ ತತ್ತರ; ಸಾವಿನ ಸಂಖ್ಯೆ 832ಕ್ಕೆ ಏರಿಕೆ!
ಇಂಡೋನೇಷ್ಯಾದ ಸುಲಾವೇಸಿ ದ್ವೀಪದಲ್ಲಿ ಶುಕ್ರವಾರ ನಡೆದ ಭೂಕಂಪ ಮತ್ತು ಸುನಾಮಿ ಹೊಡೆತಕ್ಕೆ ಮೃತಪಟ್ಟವರ ಸಂಖ್ಯೆ 832ಕ್ಕೆ ಏರಿಕೆಯಾಗಿದೆ.
ಜಕಾರ್ತಾ: ಇಂಡೋನೇಷ್ಯಾದ ಸುಲಾವೇಸಿ ದ್ವೀಪದಲ್ಲಿ ಶುಕ್ರವಾರ ನಡೆದ ಭೂಕಂಪ ಮತ್ತು ಸುನಾಮಿ ಹೊಡೆತಕ್ಕೆ ಮೃತಪಟ್ಟವರ ಸಂಖ್ಯೆ 832ಕ್ಕೆ ಏರಿಕೆಯಾಗಿದೆ. ಅಷ್ಟೇ ಅಲ್ಲದೆ, ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಸುಮಾರು 350,000 ಜನಸಂಖ್ಯೆ ಹೊಂದಿರುವ ಸುಲುವೆಸಿ ದ್ವೀಪಕ್ಕೆ ಸುಮಾರು 6 ಮೀಟರ್ (20 ಅಡಿ) ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಿದ ಎರಡು ದಿನಗಳ ನಂತರವೂ ಹಲವು ಕಟ್ಟಡಗಳ ಅವಶೇಷಗಳಡಿ ಸಿಲುಕಿರುವುದು ಪತ್ತೆಯಾಗಿದೆ. ಈ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗಿನ ಎಲ್ಲಾ ಸಾವುಗಳು ಪಲು ನಗರದಲ್ಲಿ ವರದಿಯಾಗಿವೆ.
ಇಂಡೋನೇಷ್ಯಾ ಭೂಗರ್ಭದ ಅಡಿಯಲ್ಲಿ ಹಲವಾರು ಜ್ವಾಲಾಮುಖಿಗಳು ಮತ್ತು ಬಿರುಕುಗಳು ಇರುವುದರಿಂದ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತಿರುತ್ತವೆ. 2004ರಲ್ಲಿ ಸುಮಾತ್ರಾ ದ್ವೀಪದ ಬಳಿ ಸಂಭವಿಸಿದ ಶತಮಾನದ ಭೀಕರ ಭೂಕಂಪದಲ್ಲಿ (9.1 ತೀವ್ರತೆ) ಹಲವಾರು ದೇಶಗಳಲ್ಲಿ 2,30,000ಕ್ಕೂ ಹೆಚ್ಚು ಜನ ಬಲಿಯಾಗಿದ್ದರು.