ಚೀನೀ ಸೈನಿಕರಿಗೆ ಭಾರತೀಯ ರಕ್ಷಣಾ ಮಂತ್ರಿಯಿಂದ `ನಮಸ್ತೆ ಪಾಠ`
ಭಾರತೀಯ ರಕ್ಷಣಾ ಸಚಿವರನ್ನು ಹೃದಯಸ್ಪರ್ಶಿ ಎಂದು ಪ್ರಶಂಸಿದ ಚೀನಾದ ಅಧಿಕೃತ ಪತ್ರಿಕೆ ಗ್ಲೋಬಲ್ ಟೈಮ್ಸ್.
ಬೀಜಿಂಗ್: ಅಂತರಾಷ್ಟ್ರೀಯ ನಾತು-ಲಾ ಗಡಿ ಪ್ರದೇಶಕ್ಕೆ ಭಾರತೀಯ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಇತ್ತೀಚಿಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಭಾರತ-ಚೀನಾ ನಡುವೆ ತಲೆದೂರಿದ್ದ ಡೋಕ್ಲಾಮ ವಿವಾದಕ್ಕೆ ಭಾರತೀಯ ರಕ್ಷಣಾ ಸಚಿವರ ಹೃದಯ ಸ್ಪರ್ಶಿ, ಸ್ನೇಹಿ ವರ್ತನೆಯನ್ನು ಚೀನಾದ ಅಧಿಕೃತ ಪತ್ರಿಕೆಯಾದ ಗ್ಲೋಬಲ್ ಟೈಮ್ಸ್ ಪ್ರಶಂಸಿದೆ.
ಇದೇ ಸಂದರ್ಭದಲ್ಲಿ ಚೀನಿ ಸೈನಿಕರೊಂದಿಗೆ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಚೀನಿ ಸೈನಿಕರಿಗೆ ನಮ್ಮ ಸಂಸ್ಕೃತಿಯಾದ 'ನಮಸ್ಕಾರ'ದ ಪಾಠ ಕಲಿಸಿದರು. ಇದನ್ನು ನೋಡಿದ ಚೀನಾ ಮಾಧ್ಯಮಗಳು ಸ್ವತಃ ತಾವೇ ನಿರ್ಮಲಾ ಸೀತಾರಾಂ ಅವರನ್ನು ತುಂಬು ಹೃದಯದಿಂದ ಸ್ವಾಗತಿಸಿವೆ.
ಗ್ಲೋಬಲ್ ಟೈಮ್ಸ್ ತನ್ನ ಪತ್ರಿಕೆಯ ಶೀರ್ಷಿಕೆಯಲ್ಲಿ ಸೀತಾರಾಂ ಅವರಿಗೆ ಶುಭಾಶಯಗಳನ್ನು ಕೋರಿದೆ. ಭಾರತದ ರಕ್ಷಣಾ ಮಂತ್ರಿ ಗಡಿಯಲ್ಲಿ ಉಂಟಾಗಿದ್ದ ಒತ್ತಡ ಪರಿಸ್ಥಿತಿಯನ್ನು ಕಡಿಮೆ ಮಾಡಿ, ಶಾಂತಿ ನಿರೀಕ್ಷೆಗಳನ್ನು ನೋಡುವ ಭರವಸೆ ತೋರಿದರು. ಇದು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವರ್ತನೆ ಎಂದು ಪತ್ರಿಕೆಯು ವರದಿ ಮಾಡಿದೆ.
ದೇಶದ ಜವಾಬ್ದಾರಿಯುತ ವರ್ತನೆಯ ಬಗ್ಗೆ ಮತ್ತಷ್ಟು ಹೊಗಳಿರುವ ಮಾಧ್ಯಮವು, ಗಡಿಯಲ್ಲಿ ಉಭಯ ದೇಶಗಳ ಸೈನಿಕರನ್ನು ವಿಚಾರಿಸುವ ಮೂಲಕ ಭಾರತ ಸೌಹಾರ್ದ ರಾಷ್ಟ್ರ ಎಂಬುದನ್ನು ಮತ್ತೆ ಸಾಬೀತು ಪಡಿಸಿದೆ. ಚೀನಿ ಸರ್ಕಾರ ಮತ್ತು ಪ್ರಜೆಗಳು ಭಾರತದಿಂದ ಇದನ್ನೇ ನಿರೀಕ್ಷಿಸುತ್ತಿದ್ದರು ಎಂದು ತಿಳಿಸಿದೆ.
ಭಾರತದ ಈ ನಿಲುವು ಮುಂದೆಯೂ ಹೀಗೆ ಮುಂದುವರೆದರೆ ಡೋಕ್ಲಾಮದಲ್ಲಿ ಪ್ರಸ್ತುತ ತಲೆದೋರಿರುವ ವಿವಾದ ಮತ್ತೆ ಮರುಕಳಿಸುವುದಿಲ್ಲ. ಇದನ್ನು ಭಾರತ ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದು ಮಾಧ್ಯಮಗಳು ಅಭಿಪ್ರಾಯ ವ್ಯಕ್ತಪಡಿಸಿವೆ.