ನಾಸಾ: ಪಾರ್ಕರ್ ಸೋಲಾರ್ ಪ್ರೋಬ್ ನೌಕೆ ಯಶಸ್ವಿ ಉಡಾವಣೆ
ಈ ಸೌರಾಧ್ಯಯನ ಯೋಜನೆಗೆ ಅಮೆರಿಕ ಸರ್ಕಾರ ಅಂದಾಜು 10 ಸಾವಿರ ಕೋಟಿ ಹಣ ಖರ್ಚು ಮಾಡುತ್ತಿದೆ.
ವಾಷಿಂಗ್ಟನ್: ಸೌರಮಂಡಲದ ಉಗಮಕ್ಕೆ ಕಾರಣವಾದ ಸೂರ್ಯನ ಅಧ್ಯಯನಕ್ಕೆ ಮುಂದಾಗಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಇಂದು ಸೂರ್ಯನ ಸಮೀಪಕ್ಕೆ ಸಾಗುವ ಪಾರ್ಕರ್ ಸೋಲಾರ್ ಪ್ರೋಬ್ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಅಮೇರಿಕಾದ ಕೇಪ್ ಕೆನವೆರಲ್‌ನಿಂದ ಭಾನುವಾರ ಪಾರ್ಕರ್ ಸೋಲಾರ್ ಪ್ರೋಬ್ ಅನ್ನು ಹೊತ್ತ ಡೆಲ್ಟಾ-4 ಬೃಹತ್ ರಾಕೆಟ್ ನಭಕ್ಕೆ ಜಿಗಿದಿದೆ. ಇದು ಸೌರಮಂಡಲ ಮತ್ತು ಭೂಮಿಯ ಉಗಮಕ್ಕೆ ಕಾರಣವಾದ ಸಾಕಷ್ಟು ಅಂಶಗಳ ಬಗ್ಗೆ ಅಧ್ಯಯನ ನಡೆಸಲಿದೆ. ಈ ಮೂಲಕ 7 ವರ್ಷಗಳ ಕಾಲ ಸೂರ್ಯನಲ್ಲಿರುವ ವಾತಾವರಣ, ಭೂಮಿಯ ವಾತಾವರಣದ ಮೇಲೆ ಅದರ ಪ್ರಭಾವದ ಕುರಿತಾಗಿ ಹಲವು ಮಹತ್ವದ ಸಂಗತಿಗಳನ್ನು ನಾಸಾ ಕಂಡುಕೊಳ್ಳಲಿದೆ. ಈ ಸೌರಾಧ್ಯಯನ ಯೋಜನೆಗೆ ಅಮೆರಿಕ ಸರ್ಕಾರ ಅಂದಾಜು 10 ಸಾವಿರ ಕೋಟಿ ಹಣ ಖರ್ಚು ಮಾಡುತ್ತಿದೆ. ಸೂರ್ಯ ಸಮೀಪಿಸುತ್ತಿದ್ದಂತೆ ನೌಕೆ ಗಂಟೆಗೆ 7 ಲಕ್ಷ ಕಿ.ಮೀ ವೇಗದಲ್ಲಿ ಚಲಿಸಲಿದೆ.
635 ಕೆ.ಜಿ. ತೂಕದ ಸಣ್ಣ ಕಾರ್ ಗಾತ್ರದ ಈ ನೌಕೆ ಸೂರ್ಯನಿಂದ ಸುಮಾರು 4 ಮಿಲಿಯನ್ ಮೈಲು ದೂರದ ಅದರ ಪ್ರಭಾವಲಯದಲ್ಲಿ ನೇರವಾಗಿ ಹಾರಾಟ ನಡೆಸಲಿದೆ. 'ಅಸಂಖ್ಯಾತ ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳ ಸತತ ಎಂಟು ವರ್ಷದ ಶ್ರಮದ ಫಲ ಕೊನೆಗೂ ಈಡೇರುತ್ತಿದೆ' ಎಂದು ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಯೋಜನೆಯ ವಿಜ್ಞಾನಿ ಆಡಂ ಜಬೊ ಹೇಳಿದ್ದಾರೆ.