ಇಸ್ಲಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸುವಂತೆ ಆದೇಶಿಸಿರುವ ಇಸ್ಲಮಾಬಾದ್ ಹೈಕೋರ್ಟ್, ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿದೆ. ಶರೀಫ್ ಪುತ್ರಿ ಮೇರಿಯಮ್ ನವಾಜ್ ಮತ್ತು ಅಳಿಯ ಖ್ಯಾತ ಕ್ಯಾಪ್ಟನ್ (ನಿವೃತ್ತ) ಮುಹಮ್ಮದ್ ಸಫ್ದಾರ್ ಅವರ ಜೈಲು ಶಿಕ್ಷೆಯನ್ನೂ ನ್ಯಾಯಾಲಯ ಅಮಾನತುಗೊಳಿಸಿದೆ.


COMMERCIAL BREAK
SCROLL TO CONTINUE READING

ಕಳೆದ ವಾರ, ಪಾಕಿಸ್ತಾನದ ಮಾಜಿ ಪ್ರಥಮ ಮಹಿಳೆ ಬೇಗಂ ಕುಲ್‌ಸೂಮ್‌ ನವಾಜ್ ಅವರ ನಿಧನದ ಹಿನ್ನೆಲೆಯಲ್ಲಿ ಶರೀಫ್ ಸೇರಿದಂತೆ, ಅವರ ಮಗಳು ಮೇರಿಯಮ್ ಮತ್ತು ಅಳಿಯ ಮುಹಮ್ಮದ್ ಸಫ್ದಾರ್ ಅವರನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. 


ಲಂಡನ್ ನಲ್ಲಿ ಅಕ್ರಮವಾಗಿ ನಾಲ್ಕು ಐಷಾರಾಮಿ ಫ್ಲ್ಯಾಟ್ ಗಳನ್ನು ಹೊಂದಿದ್ದ ಆರೋಪದಡಿ ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್(68), ಅವರ ಪುತ್ರಿ ಮರಿಯಮ್(44) ಮತ್ತು ಅವರ ಅಳಿಯ ಮುಹಮ್ಮದ್ ಸಫ್ದಾರ್ ಅವರನ್ನು ಜುಲೈ 13 ರಂದು ಪಾಕಿಸ್ತಾನಕ್ಕೆ ಆಗಮಿಸಿದ ಬಳಿಕ ಲಾಹೋರ್ನಲ್ಲಿ ಬಂಧಿಸಲಾಗಿತ್ತು.


ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಇಸ್ಲಾಮಾಬಾದ್ ನ್ಯಾಯಾಲಯ, ಶರೀಫ್ ಅವರಿಗೆ 10  ವರ್ಷ ಜೈಲು ಶಿಕ್ಷೆ ಮತ್ತು 8 ಮಿಲಿಯನ್ (72 ಕೋಟಿ) ರೂ. ದಂಡ ವಿಧಿಸಿ ತೀರ್ಪು ನೀಡಿತ್ತು. ಅಲ್ಲದೆ, ಶರೀಫ್ ಪುತ್ರಿ ಮೇರಿಯಮ್'ಗೆ ಏಳು ವರ್ಷ ಜೈಲು ಶಿಕ್ಷೆ ಹಾಗೂ 2 ಮಿಲಿಯನ್ (18.18 ಕೋಟಿ)ರೂ. ದಂಡ ವಿಧಿಸಲಾಗಿತ್ತು. ಜತೆಗೆ ಶರೀಫ್ ಅಳಿಯ ನಿವೃತ್ತ ಕ್ಯಾಪ್ಟನ್ ಸಫ್ದಾರ್ ಅವರಿಗೆ ಯಾವ ದಂಡ ವಿಧಿಸದೇ ಹೋದರೂ ಒಂದು ವರ್ಷದ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿತ್ತು.