ನೇಪಾಳದಲ್ಲಿ ಇಂದಿನಿಂದ ಭಾರತದ 200, 500, 2000 ರೂ. ನೋಟುಗಳು ನಿಷೇಧ: ಕಾರಣ ಏನ್ ಗೊತ್ತಾ?
ನೋಟ್ ಬ್ಯಾನ್ ಬಳಿಕ ಭಾರತದಲ್ಲಿ ಬಿಡುಗಡೆಯಾಗಿರುವ ನೂತನ 200, 500 ಮತ್ತು 2000 ರ ಭಾರತೀಯ ನೋಟುಗಳಿಗೆ ನೇಪಾಳ ಸರ್ಕಾರ ನಿಷೇಧ ಹೇರಿದೆ.
ನವದೆಹಲಿ: ನೋಟ್ ಬ್ಯಾನ್ ಬಳಿಕ ಭಾರತದಲ್ಲಿ ಬಿಡುಗಡೆಯಾಗಿರುವ ನೂತನ 200, 500 ಮತ್ತು 2000 ರೂ. ಮುಖಬೆಲೆಯ ನೋಟುಗಳನ್ನು ನೇಪಾಳ ಸರ್ಕಾರ ಅಕ್ರಮ ಎಂದು ಘೋಷಿಸಿದೆ. ನೇಪಾಳದಲ್ಲಿ ಇಂದಿನಿಂದ(ಶುಕ್ರವಾರ) ಭಾರತದ 200, 500, 2000 ರೂ. ನೋಟುಗಳನ್ನು ನಿಷೇಧಿಸಲಾಗಿದೆ.
ಹೀಗಾಗಿ ಇನ್ಮುಂದೆ ಭಾರತದ ಈ ನೋಟುಗಳನ್ನು ನಿಮ್ಮೊಂದಿಗೆ ಕೊಂಡೊಯ್ಯುವುದು, ನಿಮ್ಮಲ್ಲಿ ಇರಿಸಿಕೊಳ್ಳುವುದು ಮತ್ತು ಆ ನೋಟುಗಳನ್ನು ಬದಲಾಯಿಸಿಕೊಳ್ಳುವುದು ಕಾನೂನು ಬಾಹಿರವಾಗಿದೆ. ನೇಪಾಳದ ಸಂವಹನ ಮತ್ತು ಮಾಹಿತಿ ಸಚಿವ ಗೋಕುಲ್ ಪ್ರಸಾದ್ ಬಸ್ಕೋಟ ಅವರು ಈ ಗುರುವಾರ ರಾತ್ರಿ (ಡಿಸೆಂಬರ್ 13) ಈ ವಿಷಯವನ್ನು ದೃಢಪಡಿಸಿದ್ದಾರೆ. ನೇಪಾಳ್ ಕ್ಯಾಬಿನೆಟ್ ಈ ಆದೇಶವನ್ನು ತಕ್ಷಣದ ಪರಿಣಾಮದೊಂದಿಗೆ ಕಾರ್ಯಗತಗೊಳಿಸಲು ಆದೇಶಿಸಿದೆ.
ಸರ್ಕಾರದ ಈ ನಿರ್ಧಾರದ ಪರಿಣಾಮ ನೆರವಾಗಿ ನೇಪಾಳ ಪ್ರವಾಸೋದ್ಯಮದ ಮೇಲೆ ಉಂಟಾಗಲಿದೆ. ಭಾರತೀಯ ಪ್ರವಾಸಿಗರಿಗೆ ಇದರಿಂದ ತೊಂದರೆ ಉಂಟಾಗಲಿದೆ. ನೋಟ್ ಬ್ಯಾನ್ ಬಳಿಕ ಭಾರತದಲ್ಲಿ ಬಿಡುಗಡೆಯಾಗಿರುವ ನೂತನ 200, 500 ಮತ್ತು 2000 ರ ಭಾರತೀಯ ನೋಟುಗಳಿಗೆ ನೇಪಾಳ ಸರ್ಕಾರ ಮಾನ್ಯತೆ ನೀಡಿರಲಿಲ್ಲ. ಆದರೆ ಇದುವರೆಗೂ ಅದನ್ನು ಕಾನೂನು ಬಾಹಿರ ಎಂದೂ ಕೂಡ ಘೋಷಿಸಿರಲಿಲ್ಲ. ನೇಪಾಳ ಮಾರುಕಟ್ಟೆಯಲ್ಲಿ ಈ ನೋಟುಗಳು ಚಲಾವಣೆಯಲ್ಲಿವೆ. ಆದರೆ ನೇಪಾಳ ಸರ್ಕಾರ ಇದನ್ನು ಕಾನೂನು ಬಾಹಿರ ಎಂದು ಘೋಷಿಸುವ ಮೂಲಕ ಭಾರತೀಯ ನೋಟುಗಳ ಚಲಾವಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧರಿಸಿದೆ.
ಈಗ ಭಾರತೀಯರು ನೇಪಾಳಕ್ಕೆ ತೆರಳುವುದಾದರೆ 100-50 ಅಥವಾ ಇತರ ನೋಟುಗಳನ್ನು ಕೊಂಡೊಯ್ಯಬೇಕಾಗುತ್ತದೆ ಅಥವಾ ನೇಪಾಳದ ಗಡಿಯಲ್ಲೇ ಹೊಸ ಭಾರತೀಯ ನೋಟುಗಳನ್ನು ನೇಪಾಳದ ಕರೆನ್ಸಿಗಳೊಂದಿಗೆ ಬದಲಿಸಬೇಕಾಗುತ್ತದೆ. ಭಾರತೀಯ ಕರೆನ್ಸಿ ನೇಪಾಳದಲ್ಲಿ ಸರಾಗವಾಗಿ ವಹಿವಾಟಗುತ್ತಿತ್ತು. ಆದರೆ ನೇಪಾಳ ಸರ್ಕಾರದ ಈ ನಿರ್ಧಾರದಿಂದ ನೇಪಾಳ ಪ್ರವಾಸೋದ್ಯಮದ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಸರ್ಕಾರ ನಂಬುತ್ತದೆ. ಆದರೆ ಗ್ರಾಮಾಂತರ ಭಾಗಗಳಲ್ಲಿ ಈ ನಿರ್ಧಾರ ಅಗತ್ಯವಾಗಿತ್ತು.