ಇಸ್ಲಾಮಾಬಾದ್: ದೇಶದ ವಾಯುಪ್ರದೇಶವನ್ನು ಭಾರತಕ್ಕೆ ಸ್ಥಗಿತಗೊಳಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಸ್ಪಷ್ಟಪಡಿಸಿದ್ದಾರೆ ಎಂಬ ಮಾಹಿತಿಯನ್ನು ಡಾನ್ ಸುದ್ದಿ ವಾಹಿನಿ ನೀಡಿದೆ.


COMMERCIAL BREAK
SCROLL TO CONTINUE READING

ಬುಧವಾರ, ರಾಷ್ಟ್ರೀಯ ದತ್ತಸಂಚಯ ಮತ್ತು ನೋಂದಣಿ ಪ್ರಾಧಿಕಾರಕ್ಕೆ (ನಾಡ್ರಾ) ಭೇಟಿ ನೀಡಿದ ಸಂದರ್ಭದಲ್ಲಿ, ಪತ್ರಕರ್ತರೊಂದಿಗಿನ ಈ ವಿಷಯದ ಎಲ್ಲಾ ವರದಿಗಳನ್ನು ಶಾ ಮೆಹಮೂದ್ ಖುರೇಷಿ 'ಕಾಲ್ಪನಿಕ' ಎಂದು ತಳ್ಳಿಹಾಕಿದರು.


"ಪ್ರತಿಯೊಂದು ಅಂಶವನ್ನು ಸರಿಯಾಗಿ, ಸೂಕ್ಷ್ಮವಾಗಿ ಗಮನಿಸಿ, ಸಮಾಲೋಚಿಸಿ ನಂತರವಷ್ಟೇ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಪ್ರಧಾನಿ ಇಮ್ರಾನ್ ಖಾನ್ ಅವರ ನಿರ್ಧಾರವೇ ಅಂತಿಮ" ಎಂದು ಖುರೇಷಿ ಹೇಳಿದರು.


ಕರಾಚಿಗೆ ಎಲ್ಲಾ ಅಂತಾರಾಷ್ಟ್ರೀಯ ವಿಮಾನಯಾನಕ್ಕಾಗಿ ಎಲ್ಲಾ ಮೂರು ಮಾರ್ಗಗಳನ್ನು ಭಾರತೀಯ ನಾಗರಿಕ ವಿಮಾನಯಾನ ಪ್ರಾಧಿಕಾರ ಬುಧವಾರ ಮುಚ್ಚಿದ ನಂತರ ದೇಶದ ವಾಯುಪ್ರದೇಶವನ್ನು ಭಾರತೀಯ ವಿಮಾನಗಳಿಗೆ ಮುಚ್ಚಲಾಗಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿದ ಹಿನ್ನೆಲೆಯಲ್ಲಿ ಈ ಊಹಾಪೋಹಗಳು ಇನ್ನಷ್ಟು ತೀವ್ರಗೊಂಡಿವೆ. 


ಒಂದು ದಿನದ ಹಿಂದೆ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ, ಭಾರತದಿಂದ ಸಂಚಾರಕ್ಕಾಗಿ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು 'ಸಂಪೂರ್ಣವಾಗಿ ಸ್ಥಗಿತಗೊಳಿಸುವ' ಬಗ್ಗೆ ಯೋಚಿಸುತ್ತಿದೆ ಎಂದು ಹೇಳಿದ್ದರು.


ಇದಲ್ಲದೆ ಭಾರತ-ಅಫ್ಘಾನಿಸ್ತಾನದಲ್ಲಿ ವ್ಯಾಪಾರಕ್ಕಾಗಿ ಪಾಕಿಸ್ತಾನದ ಭೂ ಮಾರ್ಗಗಳನ್ನು ಬಳಸುವುದನ್ನು ಸಂಪೂರ್ಣ ನಿಷೇಧಿಸುವಂತೆ ಕ್ಯಾಬಿನೆಟ್ ಸಭೆ ಸೂಚಿಸಿದೆ ಎಂದು ಫವಾದ್ ಚೌಧರಿ ಮಂಗಳವಾರ ಟ್ವೀಟ್ ಮಾಡಿದ್ದಾರೆ.