ವಿಲಿಯಂ ನಾರ್ಡಸ್, ಪಾಲ್ ರೋಮರ್‌ಗೆ ನೊಬೆಲ್ ಗೌರವ
ಅಮೆರಿಕಾದ ಖ್ಯಾತ ಅರ್ಥಶಾಸ್ತ್ರಜ್ಞರಾದ ಪಾಲ್ ರೋಮೆರ್ ಹಾಗೂ ವಿಲಿಯಂ ನಾರ್ಡಸ್ ಅವರಿಗೆ 2018ನೇ ಸಾಲಿನ ನೊಬೆಲ್ ಪ್ರಶಸ್ತಿ ಲಭಿಸಿದೆ.
ಸ್ಟಾಕ್ ಹೋಮ್: ಜಾಗತಿಕ ತಾಪಮಾನ ಏರಿಕೆ ಹಾಗೂ ಮ್ಯಾಕ್ರೋಎಕನಾಮಿಕ್ ವಿಶ್ಲೇಶಣೆಯ ಮೂಲಕ ತಾಂತ್ರಿಕ ಅನ್ವೇಷಣೆಗಾಗಿ ಅಮೆರಿಕಾದ ಖ್ಯಾತ ಅರ್ಥಶಾಸ್ತ್ರಜ್ಞರಾದ ಪಾಲ್ ರೋಮೆರ್ ಹಾಗೂ ವಿಲಿಯಂ ನಾರ್ಡಸ್ ಅವರಿಗೆ 2018ನೇ ಸಾಲಿನ ನೊಬೆಲ್ ಪ್ರಶಸ್ತಿ ಲಭಿಸಿದೆ.
ಹವಾಮಾನ ಬದಲಾವಣೆ ಮತ್ತು ಆವಿಷ್ಕಾರ ವಿಷಯದಲ್ಲಿ ನಡೆಸಿದ ಸಂಶೋಧನೆಗಾಗಿ ರಾಯಲ್ ಸ್ವೀಡಿಶ್ ವಿಜ್ಞಾನ ಅಕಾಡೆಮಿ ನಾರ್ಡಸ್ ಮತ್ತು ಪಾಲ್ ರೋಮರ್‌ಗೆ ಈ ಸಾಲಿನ ನೊಬೆಲ್ ಗೌರವ ನೀಡಲಾಗುತ್ತಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಾರ್ಡಸ್ ಅಮೆರಿಕಾದ ಯೇಲ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದಾರೆ.ಯಾರ್ಕ್ ವಿಶ್ವವಿದ್ಯಾಲಯದ ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್ ನಲ್ಲಿ ಕಾರ್ಯನಿರ್ವಹಿಸಿದ್ದ ಮುಖ್ಯ ಅರ್ಥಶಾಸ್ತ್ರಜ್ಞ ರೋಮೆರ್ ಅವರುಗಳು ದೀರ್ಘಾವಧಿಯ ನಿರಂತರ ಮತ್ತು ಸುಸ್ಥಿರ ಬೆಳವಣಿಗೆಯನ್ನು ಹೇಗೆ ರಚಿಸುತ್ತೇವೆ ಎಂಬುದರ ಬಗ್ಗೆ ಉತ್ತರ ಕಂಡುಕೊಂಡಿದ್ದಾರೆ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿ ತಿಳಿಸಿದೆ.
ಡಿಸೆಂಬರ್ 10 ರಂದು ಸ್ಟಾಕ್ ಹೋಮ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಜತೆಗೆ ಪ್ರಮಾಣಪತ್ರ ಹಾಗೂ ಚಿನ್ನದ ಪದಕ ಪ್ರಧಾನ ಮಾಡಲಾಗುತ್ತದೆ. ಒಟ್ಟು 7.47 ಕೋಟಿ ಮೊತ್ತದ ಪ್ರಶಸ್ತಿಯನ್ನು ಇಬ್ಬರೂ ಹಂಚಿಕೊಳ್ಳಲಿದ್ದಾರೆ.