ಇದೇ ಮೊದಲ ಬಾರಿಗೆ ಭಾರತ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದನ್ನು ತೈವಾನ್ ನಾಗರಿಕರೊಬ್ಬರಿಗೆ ಪ್ರದಾನ ಮಾಡಿದೆ. ಈ ಅನಿರೀಕ್ಷಿತ ನಡೆಯ ಮೂಲಕ ಗುರುವಾರ ಭಾರತ ಬೀಜಿಂಗ್‌ಗೆ ಸೂಕ್ತ ಸಂದೇಶ ರವಾನಿಸಿದೆ.


COMMERCIAL BREAK
SCROLL TO CONTINUE READING

ಜಗತ್ತಿನ ಅತಿದೊಡ್ಡ ಇಲೆಕ್ಟ್ರಾನಿಕ್ಸ್ ಬಿಡಿಭಾಗಗಳನ್ನು ನಿರ್ಮಿಸುವ, ತೈಪೇ ಮೂಲದ ಫಾಕ್ಸ್‌ಕಾನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾದ ಲಿಯು ಯಂಗ್ ವೇ ಅವರನ್ನು ಭಾರತದ ಮೂರನೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಪದ್ಮ ಭೂಷಣಕ್ಕೆ ಆಯ್ಕೆ ಮಾಡಲಾಗಿದೆ.


66ರ ಹರೆಯದ ಲಿಯು ಯಂಗ್ ವೇ ಅವರು ಈ ವರ್ಷಾಂತ್ಯದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪುರಸ್ಕಾರ ಸ್ವೀಕರಿಸಲಿದ್ದಾರೆ. ಪದ್ಮ ಪ್ರಶಸ್ತಿಗಳ ವಿವಿಧ ವರ್ಗದಲ್ಲಿ 132 ಜನರಿಗೆ ಪ್ರಶಸ್ತಿಯನ್ನು ಗಣರಾಜ್ಯೋತ್ಸವದ ಹಿಂದಿನ ದಿನ ಘೋಷಿಸಲಾಗಿದೆ.


ಸಾಮಾಜಿಕ ಜಾಲತಾಣ ಎಕ್ಸ್ (ಈ ಹಿಂದೆ ಟ್ವಿಟರ್) ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಪ್ರಶಸ್ತಿಗೆ ಭಾಜನರಾದವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದು, ವಿವಿಧ ವಲಯಗಳಲ್ಲಿ ಪ್ರಶಸ್ತಿ ಪುರಸ್ಕೃತರ ಕೊಡುಗೆಗಳನ್ನು ಭಾರತ ಗೌರವಿಸುತ್ತದೆ ಎಂದಿದ್ದಾರೆ.


ಈಗಾಗಲೇ ಅಮೆರಿಕಾ ಮತ್ತು ಅದರ ಮಿತ್ರ ರಾಷ್ಟ್ರಗಳು ಉತ್ಪಾದನಾ ವಲಯವನ್ನು ಚೀನಾದಿಂದ ಹೊರತರುವ ಪ್ರಯತ್ನ ನಡೆಸಿರುವ ಸಂದರ್ಭದಲ್ಲಿ, ಭಾರತ ಏಷ್ಯಾದ ಮುಂದಿನ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುವ ನಿರೀಕ್ಷೆಗಳಿವೆ. ಈ ನಿಟ್ಟಿನಲ್ಲಿ ಮೋದಿಯವರು ಅಂತಾರಾಷ್ಟ್ರೀಯ ಹೂಡಿಕೆದಾರರನ್ನು ಭಾರತದತ್ತ ಸೆಳೆಯಲು ಪ್ರಯತ್ನ ನಡೆಸುತ್ತಿದ್ದಾರೆ.


ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದ ಲಿಯು ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಫಾಕ್ಸ್‌ಕಾನ್ ಒಂದು ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು, ತಾವು ಭಾರತದಲ್ಲೂ ಒಂದು ಸೂಕ್ತ ಉತ್ಪಾದನಾ ವ್ಯವಸ್ಥೆಯನ್ನು ನಿರ್ಮಿಸಲು ಬದ್ಧವಾಗಿದ್ದು, ಇದರಿಂದ ತಮ್ಮೆಲ್ಲ ಬಳಕೆದಾರರಿಗೆ ಪರಸ್ಪರ ಹಂಚಿಕೆ ನಡೆಸಲು, ಸಹಯೋಗ ಹೊಂದಲು ಮತ್ತು ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದಿದೆ.


ಫಾಕ್ಸ್‌ಕಾನ್ ಇತ್ತೀಚೆಗೆ ತಾನು ಭಾರತದ ದೇಶೀಯ ತಂತ್ರಜ್ಞಾನ ಸಂಸ್ಥೆಯಾದ ಎಚ್‌ಸಿಎಲ್ ಗ್ರೂಪ್ ಸಹಯೋಗದೊಡನೆ, ಭಾರತದಲ್ಲಿ ಒಂದು ಸೆಮಿಕಂಡಕ್ಟರ್ ಪ್ಯಾಕೇಜಿಂಗ್ ಮತ್ತು ಪರೀಕ್ಷಾ ಘಟಕವನ್ನು ಸ್ಥಾಪಿಸುವ ಉದ್ದೇಶ ಹೊಂದಿರುವುದಾಗಿ ಹೇಳಿತ್ತು.


ಅಮೆರಿಕಾದ ತಂತ್ರಜ್ಞಾನ ದೈತ್ಯ ಸಂಸ್ಥೆಯಾದ ಆ್ಯಪಲ್‌ನ ಪ್ರಮುಖ ಪೂರೈಕೆದಾರನಾಗಿರುವ ಫಾಕ್ಸ್‌ಕಾನ್, ನವೆಂಬರ್ ತಿಂಗಳಲ್ಲಿ ತಾನು ತನ್ನ ಕಾರ್ಯಾಚರಣೆಗಳನ್ನು ಚೀನಾದಿಂದ ಹೊರಗೆ ವೈವಿಧ್ಯಮಯಗೊಳಿಸುವ ನಿಟ್ಟಿನಲ್ಲಿ, ಭಾರತದಲ್ಲಿ 1.6 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಹೇಳಿಕೆ ನೀಡಿದೆ.


ಫಾಕ್ಸ್‌ಕಾನ್ 2013ರಲ್ಲಿ ಆ್ಯಪಲ್ ಐಫೋನ್ ಎಕ್ಸ್ಆರ್ ಆವೃತ್ತಿಯನ್ನು ಭಾರತದಲ್ಲಿ ಉತ್ಪಾದಿಸಲು ಆರಂಭಿಸಿತು. 2023ರಲ್ಲಿ ಅದೇ ಘಟಕದಲ್ಲಿ ಐಫೋನ್ 14 ಆವೃತ್ತಿಗಳನ್ನೂ ಉತ್ಪಾದಿಸಲು ಆರಂಭಿಸಿತು.


ಅದೇ ಸಮಯದಲ್ಲಿ, ನವದೆಹಲಿಯೂ ತೈವಾನಿನ ಪ್ರಮುಖ ಸೆಮಿಕಂಡಕ್ಟರ್ ಸಂಸ್ಥೆಯಾದ ತೈವಾನ್ ಸೆಮಿಕಂಡಕ್ಟರ್ ಮ್ಯಾನುಫಾಕ್ಚರಿಂಗ್ ಕಂಪನಿ (ಟಿಎಸ್ಎಂಸಿ) ಬಳಿ ಭಾರತದಲ್ಲಿ ಚಿಪ್ ಫ್ಯಾಬ್ರಿಕೇಶನ್ ಘಟಕವನ್ನು ಆರಂಭಿಸಲು ಪ್ರೋತ್ಸಾಹಿಸುತ್ತಾ ಬಂದಿದೆ.


ಅನೌಪಚಾರಿಕ ಸಂಬಂಧಗಳು ಹೆಚ್ಚು ಹೆಚ್ಚು ಬೆಳೆಯುತ್ತಾ ಬಂದಿರುವುದರಿಂದ, ಭಾರತ ಮತ್ತು ತೈವಾನ್ ನಡುವಿನ ವ್ಯಾಪಾರ ಮೌಲ್ಯ 2001ರ ವೇಳೆ ಇದ್ದ 1 ಬಿಲಿಯನ್ ಡಾಲರ್‌ನಿಂದ 2021ರ ವೇಳೆಗೆ 7 ಬಿಲಿಯನ್ ಡಾಲರ್ ತಲುಪಿದೆ.


ಕಳೆದ ವರ್ಷ ಜುಲೈ ತಿಂಗಳಲ್ಲಿ, ತೈವಾನಿನ ರಾಯಭಾರ ಕಚೇರಿಯಾಗಿ ಕಾರ್ಯ ನಿರ್ವಹಿಸುವ, ಮೂರನೇ ತೈಪೇ ಎಕಾನಮಿಕ್ ಆ್ಯಂಡ್ ಕಲ್ಚರಲ್ ಸೆಂಟರ್ ಮುಂಬೈಯಲ್ಲಿ ಉದ್ಘಾಟನೆಗೊಂಡಿತು.


ಬೀಜಿಂಗ್ ಸದಾ ತೈವಾನನ್ನು ಚೀನಾದ ಪ್ರಾಂತ್ಯ ಎಂದು ಪ್ರತಿಪಾದಿಸುತ್ತಾ ಬಂದಿದ್ದು, ತೈವಾನ್ ಅನ್ನು ಚೀನಾದೊಡನೆ ಮರು ವಿಲೀನ ನಡೆಸಲು ಅಗತ್ಯ ಬಿದ್ದರೆ ಸೇನಾಬಲವನ್ನು ಪ್ರಯೋಗಿಸಲೂ ಸಿದ್ಧವಾಗಿದೆ. ಭಾರತವೂ ಸೇರಿದಂತೆ, ಬಹುತೇಕ ರಾಷ್ಟ್ರಗಳು ತೈವಾನನ್ನು ಪ್ರತ್ಯೇಕ ರಾಷ್ಟ್ರವೆಂದು ಅಧಿಕೃತವಾಗಿ ಒಪ್ಪಿಕೊಂಡಿಲ್ಲ.


-ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ