ಪಾಕ್‌ ವಾಯು ಪ್ರದೇಶವನ್ನು ಅತಿಕ್ರಮಿಸಿ ಹಾರಾಡುವ, ಅಮೆರಿಕ ಸಹಿತ, ಎಲ್ಲ ವಿದೇಶೀ ಡ್ರೋನ್‌ಗಳನ್ನು ಕಂಡ ಕೂಡಲೇ ಹೊಡೆದುರುಳಿಸುವಂತೆ ಪಾಕ್‌ ವಾಯು ಪಡೆ ಮುಖ್ಯಸ್ಥ ತನ್ನ ಯೋಧರಿಗೆ ಖಡಕ್‌ ಸೂಚನೆ ಕೊಟ್ಟಿರುವುದಾಗಿ ವರದಿಯಾಗಿದೆ.


COMMERCIAL BREAK
SCROLL TO CONTINUE READING

ಅಮೆರಿಕದ ಡ್ರೋನ್‌ಗಳು ಆಫ್ಘಾನ್‌ - ಪಾಕ್‌ ಗಡಿಯಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು 'ಅಮೆರಿಕವನ್ನು ಗುರಿ ಇರಿಸಿಕೊಂಡೇ ಹೊರಡಿಸಲಾಗಿದೆ' ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. 


ಈ ಕುರಿತು ಆದೇಶ ನೀಡಿರುವ ಪಾಕ್‌ ವಾಯು ಪಡೆ ಮುಖ್ಯಸ್ಥ, ಸೊಹೇಲ್‌ ಅಮನ್‌ ಅವರು "ಯಾರೂ ನಮ್ಮ ವಾಯು ಪ್ರದೇಶವನ್ನು ಅತಿಕ್ರಮಿಸುವುದನ್ನು ನಾವು ಸಹಿಸುವುದಿಲ್ಲ. ಅದಕ್ಕೆ ಅವಕಾಶವನ್ನೂ ಕೊಡುವುದಿಲ್ಲ; ಆ ಪ್ರಕಾರ ನಾನು ಪಿಎಎಫ್ ಗೆ "ಅಮೆರಿಕ ಸಹಿತ ಯಾವುದೇ ವಿದೇಶೀ ಡ್ರೋನ್‌ಗಳು ಪಾಕ್‌ ವಾಯು ಪ್ರದೇಶವನ್ನು ಅತಿಕ್ರಮಿಸಿ ಒಳಬಂದರೆ ಅವುಗಳನ್ನು ಹೊಡೆದುರುಳಿಸಬೇಕು' ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ಕೊಟ್ಟಿದ್ದೇನೆ' ಎಂದು ಹೇಳಿದ್ದಾರೆ.


ಈ ಹಿಂದೆ ಅಮೆರಿಕ ವಾಯುಪಡೆ ಡ್ರೋನ್‌ಗಳ ತೀರ ಈಚಿನ ದಾಳಿಗೆ ಪಾಕ್‌ - ಅಫ್ಘಾನ್‌ ಗಡಿಯಲ್ಲಿ ಮೂವರು ಉಗ್ರರು ಹತರಾಗಿದ್ದರು. ಅಲ್ಲದೆ, ಅಮೆರಿಕದೊಂದಿಗಿನ ಪಾಕ್‌ ಸಂಬಂಧ ಹಳಸಿರುವುದು ಮತ್ತು ಇಸ್ಲಾಮಾಬಾದ್‌ ಚೀನಕ್ಕೆ ನಿಕಟವಾಗುತ್ತಿರುವ ಹಿನ್ನೆಲೆಯಲ್ಲಿ ಈ ಡ್ರೋನ್‌ ದಾಳಿ ಸಂಬಂಧ ಮಹತ್ವದ ಆದೇಶ ನೀಡಲಾಗಿದೆ ಎನ್ನಲಾಗಿದೆ.