ಪಾಕ್ ಉನ್ನತಾಧಿಕಾರಿಗಳ ಮೊದಲ ದರ್ಜೆ ವಿಮಾನ ಪ್ರಯಾಣಕ್ಕೆ ಸರ್ಕಾರ ನಿಷೇಧ
ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸರ್ಕಾರದ ಮುಖ್ಯಸ್ಥ ಸೇರಿದಂತೆ ದೇಶದ ಉನ್ನತ ಅಧಿಕಾರಿಗಳ ಮೊದಲ ದರ್ಜೆ ವಿಮಾನಯಾನವನ್ನು ನಿಷೇಧಿಸಲು ನಿರ್ಧರಿಸಲಾಗಿದೆ.
ಇಸ್ಲಾಮಾಬಾದ್: ಚುನಾವಣಾ ಪೂರ್ವ ಆಶ್ವಾಸನೆಗಳಿಗೆ ಅನುಗುಣವಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸರ್ಕಾರದ ಮುಖ್ಯಸ್ಥ ಸೇರಿದಂತೆ ದೇಶದ ಉನ್ನತ ಅಧಿಕಾರಿಗಳ ಮೊದಲ ದರ್ಜೆ ವಿಮಾನಯಾನವನ್ನು ನಿಷೇಧಿಸಲು ನಿರ್ಧರಿಸಲಾಗಿದೆ.
ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ ಅಧಿಕಾರ ವಹಿಸಿಕೊಂಡ ನಂತರ ನಡೆದ ಎರಡನೇ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಾಕಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಮೊದಲ ದರ್ಜೆಯ ಪ್ರಯಾಣಕ್ಕೆ ಇತರ ದರ್ಜೆಗಳಿಗಿಂತ 300 ಪಟ್ಟು ಅಧಿಕ ಶುಲ್ಕ ಇದೆ. ಹಾಗಾಗಿ ಸರ್ಕಾರ ದೇಶದ ಉನ್ನತ ಅಧಿಕಾರಿಗಳಾದ ಅಧ್ಯಕ್ಷರು, ಪ್ರಧಾನಮಂತ್ರಿ, ಮುಖ್ಯ ನ್ಯಾಯಾಧೀಶ, ಸೆನೆಟ್ ಅಧ್ಯಕ್ಷ, ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಮತ್ತು ಮುಖ್ಯಮಂತ್ರಿಗಳಿಗಿದ್ದ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಪ್ರಥಮ ದರ್ಜೆ ವಿಮಾನಯಾನ ಸೌಲಭ್ಯವನ್ನು ನಿಷೇಧಿಸಲಾಗಿದೆ. ಇದಕ್ಕೆ ಬದಲಾಗಿ ಅವರು ಬಿಸಿನೆಸ್ ಅಥವಾ ಕ್ಲಬ್ ಕ್ಲಾಸ್'ನಲ್ಲಿ ಪ್ರಯಾಣಿಸಬಹುದು ಎಂದು ಸಚಿವ ಸಂಪುಟ ಹೇಳಿದೆ.
ಅಷ್ಟೇ ಅಲ್ಲದೆ, ಪಾಕ್ ಉನ್ನತಾಧಿಕಾರಿಗಳ ಕಾರ್ಯ ವೇಳಾಪಟ್ಟಿಯನ್ನು ಕೂಡ ಸರ್ಕಾರ ಪರಿಷ್ಕರಿಸಿದ್ದು ಹೆಚ್ಚು ಹೊತ್ತು ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದೆ. ಅದರಂತೆ ಈ ಹಿಂದೆ 5 ದಿನಗಳು ಕೆಲಸ ಮಾಡುತ್ತಿದ್ದ ನೌಕರರು ಮುಂದಿನ ದಿನಗಳಲ್ಲಿ ವಾರದಲ್ಲಿ 6 ದಿನಗಳು ಕೆಲಸ ನಿರ್ವಹಿಸುವುದನ್ನು ಪಾಕ್ ಸರ್ಕಾರ ಕಡ್ಡಾಯಗಳಿಸಿದೆ. ಅಲ್ಲದೆ ಕಾರ್ಯವೇಳೆಯನ್ನು 8-4 ಗಂಟೆಗಳಿಗೆ ಬದಲಾಗಿ ಬೆಳಿಗ್ಗೆ 9 ಗಂಟೆಯಿಂದ 5 ಗಂಟೆವರೆಗೆ ಬದಲಾಯಿಸಲಾಗಿದ್ದರೂ, ಕಾರ್ಯ ಅವಧಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.