ಚೌಧರಿ ಶುಗರ್ ಮಿಲ್ಸ್ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಎನ್‌ಎಬಿ ಶುಕ್ರವಾರ ಬಂಧಿಸಿದೆ. 


COMMERCIAL BREAK
SCROLL TO CONTINUE READING

ಕೋಟ್ ಲಖ್‌ಪತ್ ಜೈಲಿನಿಂದ ಷರೀಫ್‌ ಅವರನ್ನು ಬಂಧಿಸಲಾಗಿದ್ದು, ಎನ್‌ಎಬಿ ತಂಡವು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಈ ಬೆನ್ನಲ್ಲೇ ನೂರಾರು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ನಾಯಕರು ಮತ್ತು ಕಾರ್ಮಿಕರು ನ್ಯಾಯಾಲಯದ ಬಳಿ ಜಮಾಯಿಸಿದರು.


ನವಾಜ್ ಷರೀಫ್ ಅವರನ್ನು 15 ದಿನಗಳ ರಿಮ್ಯಾಂಡ್ ಗೆ ನೀಡಬೇಕೆಂದು ಎನ್ಎಬಿ ವಾದಿಸಿದರೆ, ಷರೀಫ್ ಪರ ವಕೀಲರು ನವಾಜ್ ಅವರು ಎಂದಿಗೂ ಚೌಧರಿ ಶುಗರ್ ಮಿಲ್ಸ್‌ನೊಂದಿಗೆ ಭಾಗಿಯಾಗಿಲ್ಲ ಎಂದು ಪ್ರತಿವಾದ ಮಾಡಿದರು.


ಎನ್ಎಬಿ ಮುಖ್ಯಸ್ಥ ನ್ಯಾಯಮೂರ್ತಿ (ನಿವೃತ್ತ) ಜಾವೇದ್ ಇಕ್ಬಾಲ್ ಅವರು ಅಕ್ಟೋಬರ್ 4, 2019 ರಂದು ಷರೀಫ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದ್ದರು. ಚೌಧರಿ ಶುಗರ್ ಮಿಲ್ಸ್ ಪ್ರಕರಣದಲ್ಲಿ ತನಿಖಾಧಿಕಾರಿಗಳೊಂದಿಗೆ ಷರೀಫ್ ಸಹಕರಿಸುತ್ತಿಲ್ಲ ಎಂದು ಎನ್ಎಬಿ ಆರೋಪಿಸಿದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿಯನ್ನು ಬಂಧಿಸಲಾಗಿದೆ.


ಈ ಪ್ರಕರಣದಲ್ಲಿ ಷರೀಫ್ ಮತ್ತು ಅವರ ಕುಟುಂಬ ಸದಸ್ಯರು ಚೌಧರಿ ಶುಗರ್ ಮಿಲ್‌ಗಳನ್ನು ಹಣ ವರ್ಗಾವಣೆಗೆ ಬಳಸಿದ್ದಾರೆ ಮತ್ತು ಕಂಪನಿಯ ಷೇರುಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 


ಅಲ್-ಅಜೀಜಿಯಾ ಮಿಲ್ಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಷರೀಫ್ ಈಗಾಗಲೇ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.