ಇಸ್ಲಾಮಾಬಾದ್: ಪಾಕಿಸ್ತಾನದಾದ್ಯಂತ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಂದಾಗಿದ್ದು, ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ ಸಂಕಷ್ಟ ಎದುರಾಗಿದೆ.


COMMERCIAL BREAK
SCROLL TO CONTINUE READING

ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಾಲ್ ಭುಟ್ಟೋ ಜರ್ದಾರಿ(Bilawal Bhutto Zardari) ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದಾರೆ. 'ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್' ಪತ್ರಿಕೆಯ ಪ್ರಕಾರ, ಪಿಪಿಪಿ ಮುಖ್ಯಸ್ಥರು ಶುಕ್ರವಾರ ರಾತ್ರಿ ಸಾರ್ವಜನಿಕ ಸಭೆಯಲ್ಲಿ 'ದೇಶದಲ್ಲಿ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸುವುದು ನಮ್ಮ ಬೇಡಿಕೆ' ಎಂದು ಹೇಳಿದರು.


'ನಾವು ಈ ಆಡಂಬರದ ಪ್ರಜಾಪ್ರಭುತ್ವವನ್ನು ಸ್ವೀಕರಿಸುವುದಿಲ್ಲ ... ಜನರ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ-ಆರ್ಥಿಕ ಹಕ್ಕುಗಳನ್ನು ಪುನಃಸ್ಥಾಪಿಸಬೇಕು .. ಮತ್ತು ಇದಕ್ಕಾಗಿ ಪ್ರಧಾನಿ ಇಮ್ರಾನ್ ಖಾನ್ ರಾಜೀನಾಮೆ ನೀಡಬೇಕು' ಎಂದು ಅವರು ಒತ್ತಾಯಿಸಿದರು.


ಪ್ರಸ್ತುತ ಸರ್ಕಾರವು ತನ್ನ ಯಾವುದೇ ಭರವಸೆಗಳನ್ನು ಈಡೇರಿಸದ ಕಾರಣ ಸಾರ್ವಜನಿಕರಲ್ಲಿ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದ ಬಿಲಾವಾಲ್, ಪಾಕಿಸ್ತಾನದ ಎಲ್ಲ ವಿರೋಧ ಪಕ್ಷಗಳು ಇಮ್ರಾನ್ ಖಾನ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಆಶಿಸಿದೆ ಎಂದರು.


'ನಮ್ಮ ಸರ್ಕಾರ ವಿರೋಧಿ ಆಂದೋಲನವು ಕರಾಚಿಯಲ್ಲಿ ಪ್ರಾರಂಭವಾಗಿದೆ'. ಅಕ್ಟೋಬರ್ 23 ರಂದು ಥಾರ್‌ನಲ್ಲಿ ಪಿಪಿಪಿ ಪ್ರತಿಭಟನೆ ನಡೆಸಲಿದೆ. ಅಕ್ಟೋಬರ್ 26 ರಂದು ಕಾಶ್ಮೋರ್‌ನಲ್ಲಿ ಪ್ರತಿಭಟನೆ ನಡೆಸಲಿದ್ದು, ನವೆಂಬರ್ 1 ರಿಂದ ಪಂಜಾಬ್‌ನಲ್ಲಿ ರ್ಯಾಲಿಗಳು ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.


"ನಾವು ಇಡೀ ದೇಶಾದ್ಯಂತ ಸಂಚಲನ ನಡೆಸಲಿದ್ದು, ನಾವು ಕಾಶ್ಮೀರದಿಂದ ಹಿಂದಿರುಗಿದಾಗ ನೀವು (ಖಾನ್) ಹೋಗಬೇಕಾಗುತ್ತದೆ. ದೇಶದ ಪ್ರತಿಯೊಂದು ಮೂಲೆ ಮೂಲೆಯಲ್ಲಿಯೂ ನಿಮ್ಮ ಅಸಮರ್ಥತೆಯನ್ನು ನಾವು ಬಹಿರಂಗಪಡಿಸುತ್ತೇವೆ" ಎಂದು ಬಿಲಾವಾಲ್ ಹೇಳಿದರು. 'ಇಮ್ರಾನ್ ಖಾನ್‌ಗೆ 20 ಕೋಟಿ ಜನಸಂಖ್ಯೆ ಇರುವ ದೇಶವನ್ನು ಆಳುವ ಸಾಮರ್ಥ್ಯ ಅಥವಾ ಗಂಭೀರತೆ ಇಲ್ಲ' ಎಂದು ಲೇವಡಿ ಮಾಡಿದ ಅವರು, ಸಂಸತ್ತನ್ನು ಬದಿಗೆ ಸರಿಸಲಾಗಿದೆ ಮತ್ತು ರಾಜಕಾರಣಿಗಳು ಬೀದಿಗಿಳಿದಿದ್ದಾರೆ ಎಂದು ಹೇಳಿದರು.