ಪಾಕಿಸ್ತಾನದ ಮಾನವ ಹಕ್ಕುಗಳ ಹೋರಾಟಗಾರ್ತಿ ಅಸ್ಮಾ ಜಹಾಂಗೀರ್ ಇನ್ನಿಲ್ಲ
ಲಾಹೋರ್: ಪಾಕಿಸ್ತಾನದ ಪ್ರಸಿದ್ಧ ಮಾನವ ಹಕ್ಕುಗಳ ಹೋರಾಟಗಾರ್ತಿ ಮತ್ತು ವಕೀಲೆ ಆಸ್ಮಾ ಜಹಾಂಗೀರ್ ಲಾಹೋರ್ ನಲ್ಲಿ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದ್ದಿದ್ದಾರೆ.ಅವರಿಗೆ 66 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ ಹೃದಯಾಘಾತಕ್ಕೆ ಒಳಗಾದ ಅವರನ್ನು ತಕ್ಷಣ ಲಾಹೊರನಲ್ಲಿರುವ ಹಮೀದ್ ಲತಿಫ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ.
ಅಸ್ಮಾರವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲ ಟ್ವೀಟ್ ಮೂಲಕ "ಮಾನವಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ರಕ್ಷಕರಾಗಿದ್ದ ಅಶ್ಮಾ ಜಹಾಂಗೀರ್ ರವರನ್ನು ಕಳೆದುಕೊಂಡಿದ್ದೇವೆ. ನಾನು ಒಂದು ವಾರಗಳ ಹಿಂದೆ ಅಷ್ಟೇ ಅವರನ್ನು ಆಕ್ಸ್ಫರ್ಡ್ ನಲ್ಲಿ ಭೇಟಿಯಾಗಿದ್ದೆ ಈಗ ಅವರು ಇಲ್ಲ ಎನ್ನುವುದನ್ನು ನಂಬಲಾಗುತ್ತಿಲ್ಲ" ಎಂದು ಕಂಬನಿ ಮಿಡಿದಿದ್ದಾರೆ. ಇವರ ನಿಧನದಿಂದ ಪಾಕಿಸ್ತಾನಕ್ಕೆ ತುಂಬಲಾರದ ನಷ್ಟ ಎಂದು ವಕೀಲರು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ಅಸ್ಮಾರವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದನು ಎಂದು ಹೇಳಲಾಗಿದೆ.
1952 ರ ಜನವರಿಯಲ್ಲಿ ಲಾಹೋರ್ ನಲ್ಲಿ ಜನಿಸಿದ ಅಸ್ಮಾ, ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗದ ಸಹ-ಸಂಸ್ಥಾಪಕ ಅಧ್ಯಕ್ಷತೆ ವಹಿಸಿದ್ದರು. ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರೂ ಸಹ ಆಗಿದ್ದರು. 1978 ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಎಲ್ಎಲ್ಬಿ ಪದವಿಯನ್ನು ಪಡೆದುಕೊಂಡ ನಂತರ, ಹೈಕೋರ್ಟ್ ಮತ್ತು ಸರ್ವೋಚ್ಚ ನ್ಯಾಯಾಲಯಗಳಲ್ಲಿ ವಕೀಲರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.1983ರಲ್ಲಿ ಮಿಲಿಟರಿ ಸರ್ವಾಧಿಕಾರಿ ಜಿಯಾ ಉಲ್ ಹಕ್ ಆಡಳಿತವನ್ನು ವಿರೋಧಿಸಿದ್ದಕ್ಕೆ ಸೆರೆವಾಸವನ್ನು ಕೂಡ ಅನುಭವಿಸಿದ್ದರು.