ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಎದುರು ಪಾಕ್ ಪುಂಡಾಟ
ಇಂದು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಹೊರಗೆ ಮತ್ತೊಂದು ಹಿಂಸಾತ್ಮಕ ಪ್ರತಿಭಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಪ್ರತಿಭಟನಾಕಾರರಿಂದ ಹೈಕಮಿಷನ್ ಕಚೇರಿ ಆವರಣಕ್ಕೆ ಹಾನಿಯಾಗಿದೆ ಎಂದು ಭಾರತೀಯ ಹೈಕಮಿಷನ್ ಟ್ವೀಟ್ ಮಾಡಿದೆ.
ಲಂಡನ್: ಆಗಸ್ಟ್ 15 ರಂದು ಭಾರತ ಹೈಕಮಿಷನ್ ಕಚೇರಿ ಹೊರಗಿನ ಪ್ರತಿಭಟನೆಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದ ಕೆಲ ದಿನಗಳ ನಂತರ, ಪಾಕಿಸ್ತಾನದ ಬೆಂಬಲಿಗರು ಲಂಡನ್‌ನ ಕಟ್ಟಡದ ಹೊರಗೆ ಹೊಸ ಪ್ರತಿಭಟನೆಗಳು ನಡೆದಿವೆ. ಪಾಕಿಸ್ತಾನ ಬೆಂಬಲಿಗರು ಮಂಗಳವಾರ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಹೊರಗೆ ಮತ್ತೊಂದು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದು, ಹೈಕಮಿಷನ್ ಕಚೇರಿ ಆವರಣಕ್ಕೆ ಹಾನಿಯಾಗಿದೆ ಎಂದು ಯುಕೆ ಭಾರತೀಯ ಹೈಕಮಿಷನ್ ದೃಢಪಡಿಸಿದೆ.
ಯುಕೆಯಲ್ಲಿರುವ ಲಂಡನ್‌ನ ಭಾರತೀಯ ಹೈಕಮಿಷನ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ, “ಇಂದು ಸೆಪ್ಟೆಂಬರ್ 3, 2019 ರಂದು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಹೊರಗೆ ಮತ್ತೊಂದು ಹಿಂಸಾತ್ಮಕ ಪ್ರತಿಭಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಪ್ರತಿಭಟನಾಕಾರರಿಂದ ಹೈಕಮಿಷನ್ ಕಚೇರಿ ಆವರಣಕ್ಕೆ ಹಾನಿಯಾಗಿದೆ” ಎಂದು ಮಾಹಿತಿ ನೀಡಿದೆ.
ಯುಕೆ ಯಲ್ಲಿ ಭಾರತ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಲಂಡನ್ ಮೇಯರ್ ಸಾದಿಕ್ ಖಾನ್ ಹಿಂಸಾತ್ಮಕ ಪ್ರತಿಭಟನೆಯನ್ನು ಖಂಡಿಸಿ, ಇದು “ಸ್ವೀಕಾರಾರ್ಹವಲ್ಲ” ಎಂದು ಹೇಳಿದ್ದಾರೆ. "ಇಂತಹ ನಡವಳಿಕೆಯನ್ನು ನಾನು ಸಂಪೂರ್ಣವಾಗಿ ಖಂಡಿಸುತ್ತೇನೆ ಮತ್ತು ಈ ಘಟನೆ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ @metpoliceuk ಗೆ ತಿಳಿಸಿರುವುದಾಗಿ" ಖಾನ್ ಹೇಳಿದರು.
ವರದಿಗಳ ಪ್ರಕಾರ, ಹೈಕಮಿಷನ್ ಕಟ್ಟಡಕ್ಕೆ ಪಾಕಿಸ್ತಾನದ ಪ್ರತಿಭಟನಾಕಾರರು ಮೊಟ್ಟೆ ಮತ್ತು ಬೂಟುಗಳನ್ನು ಎಸೆದು ಅಟ್ಟಹಾಸ ಮೆರೆದಿದ್ದಾರೆ. ಹಿಂಸಾತ್ಮಕ ಪ್ರತಿಭಟನೆಯ ಸಮಯದಲ್ಲಿ ಕೆಲವು ಕಿಟಕಿ ಫಲಕಗಳು ಹಾನಿಗೊಳಗಾಗಿವೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15 ರಂದು ಭಾರತದ ಹೈಕಮಿಷನ್‌ನ ಹೊರಗೆ ನಡೆಸಲಾದ ಪ್ರತಿಭಟನೆ ಬಗ್ಗೆ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು.
ಈ ಸಂದರ್ಭದಲ್ಲಿ ಭಾರತೀಯ ಹೈಕಮಿಷನ್, ಅದರ ಸಿಬ್ಬಂದಿ ಮತ್ತು ಸಂದರ್ಶಕರ ಸುರಕ್ಷತೆ ಮತ್ತು ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಜಾನ್ಸನ್ ಪ್ರಧಾನಿ ಮೋದಿಗೆ ಭರವಸೆ ನೀಡಿದ್ದರು. ಹಿಂಸಾತ್ಮಕ ವಿಧಾನಗಳನ್ನು ಒಳಗೊಂಡಂತೆ ತಮ್ಮ ಪ್ರೇರಿತ ಕಾರ್ಯಸೂಚಿಯನ್ನು ಅನುಸರಿಸುವ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಯುಕೆ ಪ್ರಧಾನಿ ಜಾನ್ಸನ್ ಅವರ ಗಮನ ಸೆಳೆದಿದ್ದರು.