ಅಲ್ಮಾಟಿಯಲ್ಲಿ ಪ್ರಯಾಣಿಕರ ವಿಮಾನ ಅಪಘಾತ, ಈವರೆಗೆ 7 ಮಂದಿ ಮೃತ
ವಿಮಾನವು 95 ಪ್ರಯಾಣಿಕರು ಮತ್ತು ಐದು ಸಿಬ್ಬಂದಿಗಳನ್ನು ಹೊತ್ತೊಯ್ದಿತ್ತು. ವಿಮಾನವು ಅಲ್ಮಾಟಿಯಿಂದ ಕಜಾಕ್ ರಾಜಧಾನಿ ನೂರ್-ಸುಲ್ತಾನ್ಗೆ ಪ್ರಯಾಣಿಸುತ್ತಿತ್ತು, ಆದರೆ ರಾಡಾರ್ನಿಂದ ಕಣ್ಮರೆಯಾಯಿತು ಎಂದು ತಿಳಿದುಬಂದಿದೆ.
ಅಲ್ಮಾಟಿ: ಕಜಾಕಿಸ್ತಾನ್ನ ಅಲ್ಮಾಟಿ ಪಟ್ಟಣದ ಬಳಿ ಬೆಕ್ ಏರ್(Bek Air) ವಿಮಾನ ಅಪಘಾತಕ್ಕೀಡಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದರು. ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವಾಲಯವನ್ನು ಉಲ್ಲೇಖಿಸಿ, ಈ ಘಟನೆಯಲ್ಲಿ ಕನಿಷ್ಠ 7 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಪುಟ್ನಿಕ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಚಿವಾಲಯದ ಪ್ರಕಾರ, ವಿಮಾನವು ಟೇಕಾಫ್ ಆದ ನಂತರ ಎತ್ತರವನ್ನು ತಲುಪಲಿಲ್ಲ. ಸಮತೋಲನವನ್ನು ಕಳೆದುಕೊಂಡ ವಿಮಾನವು ಎರಡು ಅಂತಸ್ತಿನ ಕಟ್ಟಡಕ್ಕೆ ಅಪ್ಪಳಿಸಿತು. ಕೆಲವು ಜನರು ಅಪಘಾತದಲ್ಲಿ ಬದುಕುಳಿದಿದ್ದಾರೆ ಎಂದು ಅಲ್ಮಾಟಿ ವಿಮಾನ ನಿಲ್ದಾಣದ ಅಧಿಕಾರಿಗಳು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಆದರೆ ಈ ಸಂಖ್ಯೆಯನ್ನು ಇನ್ನೂ ದೃಡೀಕರಿಸಲಾಗಿಲ್ಲ.
ವಿಮಾನವು 95 ಪ್ರಯಾಣಿಕರು ಮತ್ತು ಐದು ಸಿಬ್ಬಂದಿಗಳನ್ನು ಹೊತ್ತೊಯ್ದಿತ್ತು. ವಿಮಾನವು ಅಲ್ಮಾಟಿಯಿಂದ ಕಜಾಕ್ ರಾಜಧಾನಿ ನೂರ್-ಸುಲ್ತಾನ್ಗೆ ಪ್ರಯಾಣಿಸುತ್ತಿತ್ತು, ಆದರೆ ರಾಡಾರ್ನಿಂದ ಕಣ್ಮರೆಯಾಯಿತು ಎಂದು ತಿಳಿದುಬಂದಿದೆ. ಬಳಿಕ ವಿಮಾನ ಅಪಘಾತಕ್ಕೀಡಾಗಿರುವ ಬಗ್ಗೆ ತಿಳಿಯಿತು. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎನ್ನಲಾಗಿದೆ.
ಘಟನೆಯ ತನಿಖೆಗಾಗಿ ಕಜಕ್ ಸರ್ಕಾರ ವಿಶೇಷ ಆಯೋಗವನ್ನು ರಚಿಸಿದೆ. ಆಯೋಗವು ಅಪಘಾತದ ಸ್ಥಳಕ್ಕೆ ತೆರಳಲಿದ್ದು ತನಿಖೆ ನಡೆಸಲಿದೆ.
ಅಪಘಾತದ ಎಲ್ಲಾ ವಿವರಗಳು ಮತ್ತು ಕಾರಣಗಳನ್ನು ಶೀಘ್ರದಲ್ಲಿಯೇ ಕಂಡು ಹಿಡಿಯಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಘಟನೆಯ ಪರಿಸ್ಥಿತಿ ಸ್ಪಷ್ಟವಾಗುವವರೆಗೆ, ಅಂತಹ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಜನರು ವಾಸಿಸುವಂತಹ ವಸತಿ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನ ಅಪಘಾತದ ನಂತರ ಫೋಕರ್ -100 ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಬೆಕುಮ್ ಏರ್ ವಿಮಾನಯಾನ ಸಂಸ್ಥೆ ಅಲ್ಮಾಟಿಯಿಂದ ನೂರ್-ಸುಲ್ತಾನ್ ವಿಮಾನಗಳಿಗೆ ಫೋಕರ್ -100 ವಿಮಾನವನ್ನು ಬಳಸುತ್ತದೆ.