ಜಿ-20 ಶೃಂಗಸಭೆ: ಜಪಾನ್ ತಲುಪಿದ ಪ್ರಧಾನಿ ನರೇಂದ್ರ ಮೋದಿ
ಜಪಾನ್‌ನ ಒಸಾಕಾ ನಗರಿಯಲ್ಲಿ ಜೂನ್ 28ರಿಂದ ಮಹತ್ವದ ಎರಡು ದಿನಗಳಿಂದ ಜಿ-20 ಶೃಂಗ ಸಭೆ ಆರಂಭವಾಗಲಿದೆ.
ಒಸಾಕಾ: ಜಪಾನ್‌ನ ಒಸಾಕಾ ನಗರಿಯಲ್ಲಿ ನಡೆಯಲಿರುವ ಜಿ -20 ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದು, ಗುರುವಾರ ಜಪಾನ್‌ಗೆ ಬಂದಿಳಿದಿದ್ದಾರೆ. ಈ ಸಂದರ್ಭದಲ್ಲಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿಶ್ವದ ಹಲವು ನಾಯಕರನ್ನು ಪ್ರಧಾನಿ ಭೇಟಿಯಾಗಲಿದ್ದಾರೆ.
ಜೂನ್ 28-29 ರಂದು ಜಪಾನ್‌ನ ಒಸಾಕಾ ನಗರಿಯಲ್ಲಿ ಈ ಸಮಾವೇಶ ನಡೆಯಲಿದ್ದು, ಜಪಾನ್‌ಗೆ ಹೊರಡುವ ಮೊದಲು ಮಾತನಾಡಿದ ಪ್ರಧಾನಿ ಮೋದಿ, ಮಹಿಳಾ ಸಬಲೀಕರಣ, ಕೃತಕ ಬುದ್ಧಿಮತ್ತೆ ಮತ್ತು ಭಯೋತ್ಪಾದನೆಯಂತಹ ಸವಾಲುಗಳನ್ನು ಪರಿಹರಿಸುವ ಸಾಮಾನ್ಯ ಪ್ರಯತ್ನಗಳಂತಹ ವಿಷಯಗಳ ಬಗ್ಗೆ ಚರ್ಚಿಸಲು ಉತ್ಸುಕರಾಗಿರುವುದಾಗಿ ಹೇಳಿದರು.
"ಬಹುಪಕ್ಷೀಯತೆಯ ಸುಧಾರಣೆಗೆ ನಮ್ಮ ಬಲವಾದ ಬೆಂಬಲವನ್ನು ಪುನರಾವರ್ತಿಸಲು ಮತ್ತು ಬಲಪಡಿಸಲು ಶೃಂಗಸಭೆಯು ಒಂದು ಪ್ರಮುಖ ಅವಕಾಶವನ್ನು ಒದಗಿಸುತ್ತದೆ, ಇದು ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ನಿಯಮ ಆಧಾರಿತ ಅಂತರರಾಷ್ಟ್ರೀಯ ಕ್ರಮವನ್ನು ಕಾಪಾಡಿಕೊಳ್ಳಲು ಮುಖ್ಯವಾಗಿದೆ" ಎಂದು ಪಿಎಂ ಮೋದಿ ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಭಾರತದ ಅಭಿವೃದ್ಧಿಯ ಅನುಭವವನ್ನು ಹಂಚಿಕೊಳ್ಳಲು ಈ ಸಮ್ಮೇಳನವು ಒಂದು ವೇದಿಕೆಯಾಗಿದ್ದು, ಇದು ಭಾರತದ ಜನರಿಗೆ ಪ್ರಗತಿ ಮತ್ತು ಸ್ಥಿರತೆಯ ಹಾದಿಯನ್ನು ಮುಂದುವರೆಸುವ ಮಹತ್ತರವಾದ ಆದೇಶಕ್ಕೆ ಆಧಾರವಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
ಭಾರತದ 75 ನೇ ಸ್ವಾಂತಂತ್ರ್ಯ ದಿನಾಚರಣೆ ಸಂಭ್ರಮದ ವೇಳೆ, 2022 ರಲ್ಲಿ ಜಿ 20 ಸಮಾವೇಶವು ಭಾರತದಲ್ಲಿ ನಡೆಯಲಿದೆ. ಇದೀಗ ಒಸಾಕಾದಲ್ಲಿ ನಡೆಯಲಿರುವ ಸಮಾವೇಶ ಮುಂದೆ ದೆಹಲಿಯಲ್ಲಿ ನಡೆಯಲಿರುವ ಸಮಾವೇಶಕ್ಕೆ ಅಡಿಗಲ್ಲು ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಶೀಘ್ರವೇ ರಷ್ಯಾ, ಭಾರತ ಮತ್ತು ಚೀನಾ (ಆರ್ಐಸಿ) ದೇಶಗಳ ಅನೌಪಚಾರಿಕ ಸಭೆಯನ್ನು ಭಾರತದಲ್ಲಿ ಆಯೋಜಿಸಲಾಗುವುದು. ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಮತ್ತು ಜೆಎಐ (ಜಪಾನ್, ಯುಎಸ್ಎ ಮತ್ತು ಭಾರತ) ನಾಯಕರ ಮುಂದಿನ ಅನೌಪಚಾರಿಕ ಸಭೆಗಳಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ. ಸಭೆಗಳಲ್ಲಿ ದೇಶದ ಕಾಳಜಿಯಿರುವ ದ್ವಿಪಕ್ಷೀಯ ಮಾತುಕತೆ ನಡೆಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.