ಪ್ರಧಾನಿ ಮೋದಿಯಿಂದ ರವಾಂಡಗೆ 200 ಹಸುಗಳ ಉಡುಗೊರೆ
ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮಸ್ಥರಿಗೆ 200 ಹಸುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಸಹಾಯ ಮಾಡಿದ್ದಾರೆ.
ರವಾಂಡಾ: ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ರವಂಡನ್ ಸರ್ಕಾರದ 'ಗಿರಿಂಕಾ' ಯೋಜನೆಯಡಿ ರವೆರು ಗ್ರಾಮಸ್ಥರಿಗೆ 200 ಹಸುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಸಹಾಯ ಮಾಡಿದ್ದಾರೆ.
ಗಿರಿಂಕಾ ಯೋಜನೆಯಡಿ ಆ ಪ್ರದೇಶದ ಪ್ರತಿ ಬಡಕುಟುಂಬಕ್ಕೆ ಸರ್ಕಾರ ಹಸುವನ್ನು ಉಡುಗೊರೆಯಾಗಿ ಕೊಡುತ್ತದೆ. ನಂತರ ಆ ಹಸುವಿನಿಂದ ಜನಿಸಿದ ಮೊದಲ ಕರು ಹೆಣ್ಣಾಗಿದ್ದರೆ ಅದನ್ನು ನೆರೆಹೊರೆಯವರಿಗೆ ಉಡುಗೊರೆಯಾಗಿ ಕೊಡುವ ಮೂಲಕ ಸಹೋದರತ್ವ ಭಾವನೆ ಮೂಡಿಸುವುದು ಈ ಯೋಜನೆಯ ಉದ್ದೇಶ.
ರವಾಂಡ ಅಧ್ಯಕ್ಷ ಪಾಲ್ ಕಗಾಮೆ ಉಪಸ್ಥಿತಿಯಲ್ಲಿ ನಡೆದ ಈ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಗಿರಿಂಕಾ ಯೋಜನೆಯನ್ನು ಶ್ಲಾಘಿಸಿದರಲ್ಲದೆ, ದೂರದ ರವಾಂಡಾದ ಹಳ್ಳಿಗಳಲ್ಲಿಯೂ ಆರ್ಥಿಕ ಸಬಲೀಕರಣದ ಸಾಧನವಾಗಿ ಹಸುಗಳಿಗೆ ಎಷ್ಟು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂಬುದನ್ನು ಕಂಡು ಅಚ್ಚರಿಯಾಗುತ್ತಿದೆ. ಈ ಯೋಜನೆಯಿಂದ ಬಡ ಕುಟುಂಬಗಳಿಗೆ ಸಹಾಯವಾಗಲಿದ್ದು, ಅವರ ಆರ್ಥಿಕ ಪರಿಸ್ಥತಿ ಹಾಗೂ ಆರೋಗ್ಯ ಸ್ಥಿತಿ ಸುಧಾರಿಸಲಿದೆ ಎಂದರು.
ಸದ್ಯ ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಮೊದಲ ದಿನ ರವಾಂಡಕ್ಕೆ ಭೇಟಿ ನೀಡಿದ್ದು, ಆ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.