ಒಸಾಕಾ: ಜಿ-20 ಶೃಂಗಸಭೆ ಪ್ರಾರಂಭವಾಗುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಜಿ -20 ಶೃಂಗಸಭೆಯಲ್ಲಿ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಭೆಯಲ್ಲಿ ಇರಾನ್, 5 ಜಿ, ದ್ವಿಪಕ್ಷೀಯ ಸಂಬಂಧ ಮತ್ತು ರಕ್ಷಣಾ ವ್ಯವಸ್ಥೆ ಈ ಪ್ರಮುಖ ನಾಲ್ಕು ವಿಷಯಗಳ ಬಗ್ಗೆ  ವಿಸ್ತೃತ ಮಾತುಕತೆ ನಡೆಸಿದರು. 


COMMERCIAL BREAK
SCROLL TO CONTINUE READING

ಅದೇ ಸಮಯದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳನ್ನು ಬಲಪಡಿಸುವ ಬಗ್ಗೆಯೂ ಚರ್ಚೆ ನಡೆದಿದ್ದು, ಸಬ್ ಕಾ ಸಾಥ್ ಮತ್ತು ಸಬ್ ಕಾ ವಿಕಾಸ್ ಭಾರತದ ಮಂತ್ರ ಎಂದು ಪ್ರಧಾನಿ ಮೋದಿ ಹೇಳಿದರು. ಜಪಾನ್, ಅಮೆರಿಕ ಮತ್ತು ಭಾರತ ಎಂದರೆ 'ಜೈ'(JAI) ಎಂದು ಪ್ರಧಾನಿ ಮೋದಿ ಹೇಳಿದರು.


ಜಿ-20 ಶೃಂಗಸಭೆ ಪ್ರಾರಂಭವಾಗುವ ಮೊದಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ವೇಳೆ, ಲೋಕಸಭಾ ಚುನಾವಣೆಯಲ್ಲಿ ಪಿಎಂ ಮೋದಿಯವರ ಭಾರಿ ಗೆಲುವಿಗೆ ಸಂತಸ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೋದಿಯವರನ್ನು ಅಭಿನಂದಿಸಿದರು. ಉತ್ತಮ ಸ್ನೇಹಿತರಾಗಿರುವ ನಾವು ಮಿಲಿಟರಿ ಮತ್ತು ಇತರ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದಾಗಿ ಟ್ರಂಪ್ ಹೇಳಿದರು. ಇಂಡೋ ಫೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆ ಮತ್ತು ಪ್ರಗತಿ ನಮ್ಮ ಪ್ರಮುಖ ಆದ್ಯತೆ ಎಂಬುದನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದರು. 


ಜಪಾನ್-ಅಮೆರಿಕ- ಭಾರತ ತ್ರಿಪಕ್ಷೀಯ ಮಾತುಕತೆ ಬಳಿಕ ಮೋದಿ-ಟ್ರಂಪ್ ಭೇಟಿ ನಡೆಯಿತು. ತ್ರಿಪಕ್ಷೀಯ ಬಾಂಧವ್ಯದ ಅಗತ್ಯದ ಬಗ್ಗೆ ಪ್ರಧಾನಿ ಮೋದಿ ವಿವರಿಸಿದರು. ಬಳಿಕ ಟ್ರಂಪ್ ಜೊತೆಗೆ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ, ಪ್ರಧಾನಿ ಮೋದಿ ಅವರು "ಭಾರತದ ಮಹತ್ವವನ್ನು" ಒತ್ತಿಹೇಳಿದ್ದಾರೆ. ಅಮೆರಿಕದ ಉತ್ಪನ್ನಗಳ ಮೇಲೆ "ಅತಿ ಹೆಚ್ಚು" ಶುಲ್ಕ ವಿಧಿಸುವ ಭಾರತದ ನಿರ್ಧಾರವನ್ನು ಅಮೇರಿಕಾ ಅಧ್ಯಕ್ಷರು ಬಹಿರಂಗವಾಗಿ ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ-ಟ್ರಂಪ್ ಅವರ ಸಭೆ ಮುಖ್ಯವಾಗಿದೆ.


ಗುರುವಾರ ಜಪಾನ್‌ಗೆ ಆಗಮಿಸುವ ಮುನ್ನ ಟ್ವೀಟ್ ಮಾಡಿದ್ದ ಅಮೇರಿಕಾ ಅಧ್ಯಕ್ಷ ಟ್ರಂಪ್‌, 'ಅಮೆರಿಕದ ಉತ್ಪನ್ನಗಳ ಮೇಲೆ ಕೆಲವು ವರ್ಷಗಳಿಂದ ಅತ್ಯಂತ ದುಬಾರಿ ತೆರಿಗೆ ವಿಧಿಸುತ್ತಿರುವ ಭಾರತದ ನೀತಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆ ನಡೆಸಲಿದ್ದೇನೆ. ಇತ್ತೀಚೆಗೆ ಭಾರತ ಮತ್ತೊಮ್ಮೆ ತೆರಿಗೆ ಏರಿಸಿದೆ. ಈ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕು' ಎಂದು ಆಗ್ರಹಿಸಿದ್ದರು.