ಅಳುವ ಕಂದನಿಗೆ ಸಾರ್ವಜನಿಕವಾಗಿ ಎದೆಹಾಲುಣಿಸಲು ಹಿಂದೇಟು ಹಾಕುವ ತಾಯಂದಿರಿರುವ ಈ ಕಾಲದಲ್ಲಿ, ಅರ್ಜೆಂಟೈನಾದ ಪೋಲಿಸ್ ಅಧಿಕಾರಿಯೊಬ್ಬರು ಆಸ್ಪತ್ರೆಯಲ್ಲಿ ಅಳುತ್ತಿದ್ದ ಅಪೌಷ್ಟಿಕತೆಯುಳ್ಳ ಅಪರಿಚಿತ ಮಗುವಿಗೆ ಎದೆಹಾಲುಣಿಸಿ ಸಾಕಷ್ಟು ಪ್ರಶಂಸೆಗೆ ಪಾತ್ರರಾಗಿದ್ದಾರೆ. 


COMMERCIAL BREAK
SCROLL TO CONTINUE READING

ಅರ್ಜೆಂಟೈನಾದ ಮಕ್ಕಳ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೋಲಿಸ್ ಅಧಿಕಾರಿ ಸೆಲೆಸ್ಟ್ ಜಾಕ್ಲೈನ್ ಅಯಲಾ, ಆಸ್ಪತ್ರೆಗೆ ದಾಖಲಾದ ಹಸಿವಿನಿಂದ ಅಳುತ್ತಿದ್ದ ಮಗುವನ್ನು ಸಮಾಧಾನಪಡಿಸಲು ಅಲ್ಲಿನ ಸಿಬ್ಬಂದಿ ಹಾಗೂ ಶುಶ್ರೂಶಕಿಯರು ಹರಸಾಹಸಪಡುತ್ತಿದ್ದುದನ್ನು ಕಂಡು ತಾವೇ ಮಗುವನ್ನು ಸುಧಾರಿಸಲು ಮುಂದಾಗಿದ್ದಾರೆ. ಕೈಗೆತ್ತಿಕೊಂಡ ಮಗುವನ್ನು ಮೊದಲಿಗೆ ಮುದ್ದಾಡಿದ ಅವರು, ನಂತರ ಅದನ್ನು ಶಾಂತಗೊಳಿಸಲು ಆಕೆ ಎದೆಹಾಲುಣಿಸಲು ಆರಂಭಿಸಿದ್ದಾರೆ. ಆ ಕೂಡಲೇ ಮಗು ಅಳು ನಿಲ್ಲಿಸಿದೆ ಎಂದು 'ದಿ ಮಿರರ್' ಪತ್ರಿಕೆ ವರದಿ ಮಾಡಿದೆ. ಈ ಘಟನೆ ಬ್ಯೂನಸ್ ಏರಿಸ್'ನ ಸೊರ್ ಮರಿಯಾ ಲುಡೋವಿಕಾ ಮಕ್ಕಳ ಆಸ್ಪತ್ರೆಯಲ್ಲಿ ಬುಧವಾರ ನಡೆದಿದೆ. 


ಮಗುವಿಗೆ ಎದೆಹಾಲುಣಿಸುತ್ತಿರುವ ದೃಶ್ಯವನ್ನು ಕ್ಲಿಕ್ಕಿಸಿರುವ ಅಲ್ಲೇ ಇದ್ದ ಮಾರ್ಕೊಸ್ ಹೆರೆಡಿಯಾ ಫೇಸ್ಬುಕ್'ನಲ್ಲಿ ಶೇರ್ ಮಾಡಿದ್ದಾರೆ. ಇದೀಗ ಈ ಫೋಟೋ ಎಲ್ಲೆಡೆ ಸಖತ್ ವೈರಲ್ ಆಗಿದೆ. ಇದುವರೆಗೂ ಈ ಪೋಸ್ಟ್ 1 ಲಕ್ಷಕ್ಕೂ ಅಧಿಕ ಶೇರ್ ಆಗಿದ್ದು, ನೂರಾರು ಜನ ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಟ್ವಿಟ್ಟರ್'ನಲ್ಲಿ #CelesteAyala ಎಂಬ ಹ್ಯಾಶ್ ಟ್ಯಾಗ್ ಕೂಡ ವೈರಲ್ ಆಗಿದೆ. 



ಪೋಲಿಸ್ ಅಧಿಕಾರಿ ಸೆಲೆಸ್ಟ್ ಜಾಕ್ಲೈನ್ ಅಯಲಾ ಅವರ ಕಾರ್ಯವನ್ನು ಶ್ಲಾಘಿಸಿರುವ ಬ್ಯೂನಸ್ ಏರಿಸ್ ಅಧ್ಯಕ್ಷ ಕ್ರಿಸ್ತಿಯನ್ ರಿಟೆಂಡೋ ಅವರು, ಆಕೆಗೆ ಇಲಾಖೆಯಲ್ಲಿ ಉನ್ನತ ಹುದ್ದೆಗೆ ಬಡ್ತಿಯನ್ನೂ ನೀಡಿದ್ದಾರೆ.