ಫೋನ್ ಮೂಲಕ ಇಮ್ರಾನ್ ಖಾನ್ ರನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ತೆಹರೀಕ್-ಇ-ಇನ್ಸಾಫ್(ಪಿಟಿಐ) ಪಕ್ಷ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ನವದೆಹಲಿ: ಕಳೆದ ಜುಲೈ 25ರಂದು ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕ್ರಿಕೆಟರ್-ರಾಜಕಾರಣಿ ಇಮ್ರಾನ್ ಖಾನ್ ನೇತೃತ್ವದ ತೆಹರೀಕ್-ಇ-ಇನ್ಸಾಫ್(ಪಿಟಿಐ) ಪಕ್ಷ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆಗಸ್ಟ್ 11 ರಂದು ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಮ್ರಾನ್ ಖಾನ್ನ ಈ ವಿಜಯಕ್ಕಾಗಿ ಇಮ್ರಾನ್ ಖಾನ್ ಅವರನ್ನು ಅಭಿನಂದಿಸಿದರು.
ಸೋಮವಾರ ಸಂಜೆ ಇಮ್ರಾನ್ ಖಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಇಮ್ರಾನ್ ಖಾನ್ ಅವರನ್ನು ಅಭಿನಂದಿಸಿದರು ಮತ್ತು ಪಾಕಿಸ್ತಾನದಲ್ಲಿ ಅವರ ನಾಯಕತ್ವದಲ್ಲಿ, ಪ್ರಜಾಪ್ರಭುತ್ವದ ಬೇರುಗಳು ಗಾಢವಾಗುತ್ತವೆ ಮತ್ತು ಪ್ರಗತಿಶೀಲ ಮಾರ್ಗದಲ್ಲಿ ಪಾಕಿಸ್ತಾನ ಸಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವುದಾಗಿ ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ. ಈ ವೇಳೆ ನೆರೆಯ ರಾಷ್ಟ್ರಗಳೊಂದಿಗೆ ಸ್ನೇಹ- ಸೌಹಾರ್ದಯುತ ಸಂಬಂಧ, ಶಾಂತಿ ಮತ್ತು ಅಭಿವೃದ್ಧಿ ಕುರಿತಾದ ದೃಷ್ಟಿಕೋನವನ್ನು ಪುನರುಚ್ಚರಿಸಿದ್ದಾರೆ ಎನ್ನಲಾಗಿದೆ.
ಪಿಟಿಐಗೆ ಪ್ರಸ್ತುತ 116 ಸ್ಥಾನಗಳಿವೆ. ಸರ್ಕಾರ ರಚಿಸಲು ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಶಾಸಕರೊಂದಿಗೆ ಅದು ಸಂಪರ್ಕದಲ್ಲಿದೆ ಎಂದು ಪಕ್ಷ ಹೇಳಿದೆ. ಖೈಬರ್ ಪಖ್ತುನ್ಖ್ವಾದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್ ಅವರು ಆಗಸ್ಟ್ 11 ರಂದು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದಾಗಿ ಹೇಳಿದರು.
PML-Q ಬೆಂಬಲ
ಶುಜಾತ್ ಹುಸೇನ್ ಅವರ ಪಕ್ಷ, ಪಾಕಿಸ್ತಾನ ಮುಸ್ಲಿಂ ಲೀಗ್-ಕುವೈಟ್ (ಪಿಎಂಎಲ್-ಕ್ಯೂ) ಇಮ್ರಾನ್ ಖಾನ್ ಅವರ ಪಿಟಿಐಗೆ ಬೆಂಬಲ ಘೋಷಿಸಿದೆ. ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ವಿರೋಧಿ ಪಕ್ಷ ಪಿಎಂಎಲ್-ಎನ್ ಪ್ರಸ್ತಾಪವನ್ನು ನಿರಾಕರಿಸುವ ಮೂಲಕ ಪಿಟಿಐಯೊಂದಿಗಿನ ಸಂಬಂಧಗಳನ್ನು ಬಲಪಡಿಸುವ ಒಪ್ಪಂದವನ್ನು ಸ್ಪಷ್ಟಪಡಿಸಿದೆ. ಪಿಎಂಎಲ್-ಎನ್ ಪಾಕಿಸ್ತಾನದ ಜನರಿಗಾಗಿ ಅಲ್ಲ, ಕೇವಲ ತನ್ನ ಹಿತಕ್ಕಾಗಿ ರಾಜಕೀಯದಲ್ಲಿ ಭಾಗಿಯಾಗಿದೆ. ಹಾಗಾಗಿ ಕೇಂದ್ರದಲ್ಲಿ ಮತ್ತು ಪಂಜಾಬ್ನಲ್ಲಿ ಸರ್ಕಾರವನ್ನು ರೂಪಿಸಲು ಪಿಎಂಎಲ್-ಕ್ಯೂ ಪಿಟಿಐಗೆ ಬೆಂಬಲ ನೀಡುತ್ತದೆ ಎಂದು ಶುಜಾತ್ ಹೇಳಿದ್ದಾರೆ.