ಪೆಶಾವರ್ ನಲ್ಲಿ ಸಿಖ್ ಯುವಕನ ಹತ್ಯೆ, ಪಾಕ್ ಗೆ ಖಡಕ್ ಸಂದೇಶ ರವಾನಿಸಿದ ಗೃಹ ಇಲಾಖೆ
ಕಳೆದ ಮೂರು ದಿನಗಳಲ್ಲಿ ಪಾಕಿಸ್ತಾನದಲ್ಲೂ ಸಿಖ್ ಸಮುದಾಯದ ವಿರುದ್ಧ ಎರಡು ದೊಡ್ಡ ಘಟನೆಗಳು ಸಂಭವಿಸಿವೆ.
ನವದೆಹಲಿ:ಪಾಕಿಸ್ತಾನದ ಪೆಶಾವರ್ ನಲ್ಲಿ ನಡೆದ ಸಿಖ್ ಯುವಕನ ಹತ್ಯೆಯ ಹಿನ್ನೆಲೆ ಭಾರತದ ಗೃಹ ಇಲಾಖೆ ಪಾಕ್ ಗೆ ಖಡಕ್ ಸಂದೇಶ ರವಾನಿಸಿದೆ. ಈ ಕುರಿತು ಹೇಳಿಗೆ ಬಿಡುಗಡೆ ಮಾಡಿರುವ ಕೇಂದ್ರ ಗೃಹ ಸಚಿವಾಲಯ ಪೆಶಾವರ್ ನಲ್ಲಿ ನಡೆದ ಸಿಖ್ ಯುವಕನ ಹತ್ಯೆಯನ್ನು ಖಂಡಿಸಿದೆ. ಅಷ್ಟೇ ಅಲ್ಲ ಪಾಕ್ ಗೆ ಖಡಕ್ ಸಂದೇಶ ರವಾನಿಸಿರುವ ಇಲಾಖೆ ಸತ್ಯದಿಂದ ದೂರ ಸರಿಯುವುದನ್ನು ನಿಲ್ಲಿಸಿ ಮತ್ತು ಕಠಿಣ ಕ್ರಮ ಜರುಗಿಸಿ ಎಂದು ಹೇಳಿದೆ. ಕಳೆದ ಮೂರು ದಿನಗಳಲ್ಲಿ ಪಾಕಿಸ್ತಾನದಲ್ಲಿ ಸಿಖ್ ಸಮುದಾಯದ ವಿರುದ್ಧ ಎರಡು ದೊಡ್ಡ ಘಟನೆಗಳು ಸಂಭವಿಸಿವೆ. ಅತ್ತ ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್ ಕೂಡ ಪೆಶಾವರ್ ನಲ್ಲಿ ಸಿಖ್ ಯುವಕನ ಹತ್ಯೆ ಪ್ರಕರಣವನ್ನು ಖಂಡಿಸಿದ್ದು, ಪಾಕ್ ಪ್ರಧಾನಿ ಈ ಪ್ರಕರಣದ ಕೂಲಂಕುಷ ತನಿಖೆ ಕೈಗೊಂಡು ದೋಷಿಗಳನ್ನು ಜೈಲಿಗಟ್ಟಬೇಕು ಎಂದು ಮನವಿ ಮಾಡಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ನಾನಕಾನಾ ಸಾಹೇಬ್ ಗುರುದ್ವಾರದ ಮೇಲೆ ಮುಸ್ಲಿಂ ಸಮುದಾಯದ ಗುಂಪು ದಾಳಿ ನಡೆಸಿದ ಎರಡು ದಿನಗಳ ಬಳಿಕ ಸಿಖ್ ಸಮುದಾಯಕ್ಕೆ ಸೇರಿದ ಪರವಿಂದರ್ ಸಿಂಗ್ ಹೆಸರಿನ ಓರ್ವ ವ್ಯಕ್ತಿಯನ್ನು ಪೇಶಾವರ್ ನಲ್ಲಿ ಕೆಲ ಅಜ್ಞಾತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು. ಪರವಿಂದರ್ ಸಿಂಗ್ ಓರ್ವ ಸ್ಥಳೀಯ ಪತ್ರಕರ್ತರಾಗಿರುವ ಹರ್ಮಿತ್ ಸಿಂಗ್ ಅವರ ಕಿರಿಯ ಸಹೋದರರಾಗಿದ್ದಾರೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿರುವ ಹರ್ಮಿತ್, ಮಲೇಷಿಯಾದಲ್ಲಿ ವ್ಯಾಪಾರ ನಡೆಸುವ ಪರವಿಂದರ್ ಫೆಬ್ರುವರಿ ತಿಂಗಳಿನಲ್ಲಿ ನಡೆಯಬೇಕಿದ್ದ ತಮ್ಮ ಮದುವೆಗಾಗಿ ಶಾಪಿಂಗ್ ಮಾಡಲು ಪೇಶಾವರ್ ಗೆ ಭೇಟಿ ನೀಡಿದ್ದರು ಎಂದಿದ್ದಾರೆ. ಸಹೋದರನ ಸಾವಿನಿಂದ ನೊಂದ ಹರ್ಮಿತ್, "ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಯಾವುದೇ ದೇಶ ಪ್ರಗತಿ ಹೊಂದಲು ಸಾಧ್ಯವಿಲ್ಲ. ಅಲ್ಪಸಂಖ್ಯಾತರ ಕಾರಣದಿಂದಲೇ ಪಾಕಿಸ್ತಾನ ಸುಂದರವಾಗಿದೆ. ಆದರೆ, ಪ್ರತಿವರ್ಷ ನಾವು ನಮ್ಮವರ ಶವಗಳಿಗೆ ಹೆಗಲು ನೀಡುವುದು ಅಂತ್ಯವಾಗಬೇಕು" ಎಂದು ಸರ್ಕಾರವನ್ನು ಬೇಡಿಕೊಂಡಿದ್ದಾರೆ.
ಅಲ್ಪಸಂಖ್ಯಾತರ ರಕ್ಷಣೆಗಾಗಿ ಪಾಕಿಸ್ತಾನ ಹಲವು ದೇಶಗಳಿಂದ ಹಣಕಾಸಿನ ಸಹಾಯ ಪಡೆಯುತ್ತದೆ. ಆದರೆ, ಇಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ರಕ್ಷಣೆ ನೀಡಲಾಗುವುದಿಲ್ಲ. ಆದ್ದರಿಂದ ಇಲ್ಲಿ ತಾವು ತಮ್ಮ ತಮ್ಮನ ಶವ ತೆಗೆದುಕೊಂಡು ಹೋಗಲು ಬಂದಿರುವುದಾಗಿ ಹರ್ಮಿತ್ ತಿಳಿಸಿದ್ದಾರೆ. ಅಷ್ಟೇ ಅಲ್ಲ ಪಾಕ್ ಸರ್ಕಾರ ತಮ್ಮ ಸಹೋದರನ ಹತ್ಯೆಗೆ ಕಾರಣರಾದವರಿಗೆ ಶಿಕ್ಷೆ ನೀಡುವವರೆಗೆ ತಾವು ಸುಮ್ಮನಿರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಗುರು ನಾನಕ್ ದೇವ್ ಅವರ ಜನ್ಮ ಸ್ಥಾನವಾಗಿರುವ ನಾನಕಾನ ಸಾಹೀಬ್ ಮೇಲೆ ನಡೆದ ಹಲ್ಲೆಯ ಬಳಿಕ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರು ಅದರಲ್ಲೂ ವಿಶೇಷವಾಗಿ ಶಿಖ್ ಸಮುದಾಯದ ಜನರು ಭಯದ ವಾತಾವರಣದಲ್ಲಿ ಕಾಲ ಕಳೆಯುವಂತಾಗಿದೆ. ಒಂದು ಕುಟುಂಬದ ನೇತೃತ್ವದ ಅಡಿ ಬಂದ ಮುಸ್ಲಿಮರ ಗುಂಪೊಂದು ಅಲ್ಲಿನ ಓರ್ವ ಸಿಖ್ ಯುವತಿ ಜಗಜೀತ್ ಕೌರ್ ಅವರನ್ನು ಅಪಹರಿಸಿ ಬಲವಂತವಾಗಿ ಅವರ ಧರ್ಮಪರಿವರ್ತಿಸಿ, ನನಕಾನಾ ಸಾಹೀಬ್ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಭಾರತ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಅಷ್ಟೇ ಅಲ್ಲ ಆಡಳಿತಾರೂಢ ಬಿಜೆಪಿ ಪಕ್ಷ ಕಾಂಗ್ರೆಸ್ ಜತೆಗೂಡಿ ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಎದುರು ಪ್ರತಿಭಟನೆ ಕೂಡ ನಡೆಸಿದೆ ಎಂಬುದು ಇಲ್ಲಿ ಉಲ್ಲೇಖನೀಯ.