ಈಸ್ಟರ್ ಬಾಂಬ್ ದಾಳಿ: ಇಂದಿನಿಂದ ಶ್ರೀಲಂಕಾದಲ್ಲಿ ಬುರ್ಖಾ ಬ್ಯಾನ್!
ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ವ್ಯಕ್ತಿಯ ಗುರುತನ್ನು ಮರೆಮಾಚುವ ಯಾವುದೇ ಉಡುಪನ್ನು, ಮುಖ ಕವಚವನ್ನು ಧರಿಸುವಂತಿಲ್ಲ ಎಂದು ಅಧ್ಯಕ್ಷರ ಕಚೇರಿ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಕೊಲಂಬೋ: ಈಸ್ಟರ್ ಭಾನುವಾರದಂದು ನಡೆದ ಸರಣಿ ಬಾಂಬ್ ದಾಳಿಯ ಬಳಿಕ ಶ್ರೀಲಂಕಾ ಸರ್ಕಾರ ಸುರಕ್ಷತೆಗಾಗಿ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಮುಸ್ಲಿಂ ಮಹಿಳೆಯರು ಧರಿಸುವ ಎಲ್ಲಾ ರೀತಿಯ ಬುರ್ಕಾ ಮತ್ತು ಮುಖ ಕವಚಗಳಿಗೆ ನಿಷೇಧ ಹೇರಿ ಆದೇಶ ಹೊರಡಿಸಿದೆ.
ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಇಂದಿನಿಂದ (ಸೋಮವಾರ) ಅನ್ವಯವಾಗುವಂತೆ ಬುರ್ಕಾ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ವ್ಯಕ್ತಿಯ ಗುರುತನ್ನು ಮರೆಮಾಚುವ ಯಾವುದೇ ಉಡುಪನ್ನು, ಮುಖ ಕವಚವನ್ನು ಧರಿಸುವಂತಿಲ್ಲ ಎಂದು ಅಧ್ಯಕ್ಷರ ಕಚೇರಿ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಮುಸ್ಲಿಂ ಮಹಿಳೆಯರು ಧರಿಸುವ ನಿಕಾಬ್ ಮತ್ತು ಬುರ್ಕಾಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ನಿರ್ದಿಷ್ಟವಾಗಿ ಆ ಹೆಸರುಗಳನ್ನೂ ಸರ್ಕಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿಲ್ಲ.
ಕಳೆದ ಭಾನುವಾರ ಈಸ್ಟರ್ ಹಬ್ಬದ ಸಂಭ್ರಮದಲ್ಲಿದ್ದ ಶ್ರೀಲಂಕಾದ ರಾಜಧಾನಿ ಕೊಲಂಬೋದ ಒಟ್ಟು 8 ಕಡೆಗಳಲ್ಲಿ ಬಾಂಬ್ ಸ್ಫೋಟವಾಗಿತ್ತು. ಈ ವೇಳೆ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅದರಲ್ಲಿ ಕರ್ನಾಟಕದ 10 ಜನರೂ ಸೇರಿದ್ದರು. ಈ ದಾಳಿ ನಡೆಸಿದ್ದು ನಾವೇ ಎಂದು ಐಸಿಸ್ ಒಪ್ಪಿಕೊಂಡಿತ್ತು. ಬಾಂಬ್ ದಾಳಿ ಹಿನ್ನೆಲೆ ಶ್ರೀಲಂಕಾ ಸರ್ಕಾರ 2 ಉಗ್ರ ಸಂಘಟನೆಗಳ ಮೇಲೆ ನಿಷೇಧವನ್ನೂ ಹೇರಿದೆ.