ಶ್ರೀಲಂಕಾ ಬಾಂಬ್ ದಾಳಿಯಲ್ಲಿ ಸತ್ತಿದ್ದು 138 ಮಿಲಿಯನ್ ಜನ..! ಟ್ರಂಪ್ ಟ್ವೀಟ್
ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟವನ್ನು ಖಂಡಿಸಿರುವ ಟ್ವೀಟ್ ಮಾಡಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸುವ ಭರದಲ್ಲಿ ದಾಳಿಯಲ್ಲಿ ಸತ್ತವರ ಸಂಖ್ಯೆಯನ್ನು ತಪ್ಪಾಗಿ ಟ್ವೀಟ್ ಮಾಡಿದ್ದಾರೆ.
ನವದೆಹಲಿ: ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟವನ್ನು ಖಂಡಿಸಿರುವ ಟ್ವೀಟ್ ಮಾಡಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸುವ ಭರದಲ್ಲಿ ದಾಳಿಯಲ್ಲಿ ಸತ್ತವರ ಸಂಖ್ಯೆಯನ್ನು ತಪ್ಪಾಗಿ ಟ್ವೀಟ್ ಮಾಡಿದ್ದಾರೆ.
ಆದರೆ ಈಗ ಈ ಟ್ವೀಟ್ ನ್ನು ಡಿಲಿಟ್ ಮಾಡಲಾಗಿದೆಯಾದರೂ ಕೂಡ ಅದರ ಸ್ಕ್ರೀನ್ ಶಾಟ್ ಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ. ಅಳಿಸಿ ಹಾಕಿರುವ ಟ್ವೀಟ್ ನಲ್ಲಿ ಕನಿಷ್ಠ 138 ಮಿಲಿಯನ್ ಜನರು ಸಾವನ್ನಪ್ಪಿದ್ದಲ್ಲದೇ 600 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಉಲ್ಲೇಖಿಸಿದ್ದರು.ಈಗ ಈ ಟ್ವೀಟ್ ನ್ನು ಅಳಿಸಿ ಹಾಕಿ ಇನ್ನೊಂದು ಟ್ವೀಟ್ ಮಾಡಿರುವ ಟ್ರಂಪ್, ಉಗ್ರರ ಆತ್ಮಹತ್ಯಾ ದಾಳಿಯನ್ನು ಖಂಡಿಸಿದ್ದಾರೆ ಅಲ್ಲದೆ ಅಮೇರಿಕಾ ಯಾವುದೇ ರೀತಿಯ ಸಹಾಯ ಮಾಡಲು ಸಿದ್ದ ಎಂದು ಹೇಳಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಈ ದಾಳಿಯನ್ನು ಖಂಡಿಸಿ "ಇಂತಹ ದುಷ್ಕೃತ್ಯಕ್ಕೆ ನಮ್ಮ ಪ್ರದೇಶದಲ್ಲಿ ಯಾವುದೇ ಅವಕಾಶವಿಲ್ಲ, ಭಾರತ ದೇಶವು ಇಂತಹ ಸಮಯದಲ್ಲಿ ಶ್ರೀಲಂಕಾ ಜನರೊಂದಿಗೆ ಬೆಂಬಲವಾಗಿ ನಿಲ್ಲಲಿದೆ. ದಾಳಿಯಲ್ಲಿ ಮೃತಪಟ್ಟವರಿಗೆ ಮತ್ತು ಗಾಯಗೊಂಡಿರುವವರೆಗೆ ನನ್ನ ಸಂತಾಪ ಮತ್ತು ಪ್ರಾರ್ಥನೆಗಳು ಇರಲಿವೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಈ ದಾಳಿ ನಡೆದ ನಂತರ ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂಘೆ " ನಮ್ಮ ಜನರ ಮೇಲೆ ಮಾಡಿರುವ ಈ ದಾಳಿಯನ್ನು ನಾನು ಖಂಡಿಸುತ್ತೇನೆ.ಇಂತಹ ಕಠಿಣ ಸಂದರ್ಭದಲ್ಲಿ ಎಲ್ಲ ಶ್ರೀಲಂಕಾದ ಜನರು ಒಗ್ಗಟ್ಟಿನಿಂದಿರಲು ಬಯಸುತ್ತೇನೆ.ಈ ಸಂದರ್ಭದಲ್ಲಿ ಯಾವುದೇ ರೀತಿಯ ಊಹಾಪೋಹಗಳಿಗೆ ಕಿವಿಗೋಡಬೇಡಿ.ಸರ್ಕಾರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಎಲ್ಲ ರೀತಿಯ ಕ್ರಮವನ್ನು ತೆಗೆದುಕೊಳ್ಳುತ್ತದೆ" ಎಂದು ಹೇಳಿದರು.