ಕರ್ನಾಟಕದ ಹಿರಿಯ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯನವರು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ತಾನು ಸಿದ್ದರಾಮಯ್ಯನವರ ಟ್ವೀಟ್ ನೋಡಿ ಗಾಬರಿಗೊಳಗಾದೆ ಎಂದುದಕ್ಕೆ ಮರಳಿ ಉತ್ತರ ನೀಡಿದ್ದಾರೆ. ಇಬ್ಬರ ಮಧ್ಯೆ ನಡೆಯುತ್ತಿದ್ದ ಮಾತಿನ ಸಮರಕ್ಕೆ ಇನ್ನಷ್ಟು ವೇಗ ನೀಡಿರುವ ಸಿದ್ದರಾಮಯ್ಯನವರು, "ನೀವು ಹೀಗೆ ಗಾಬರಿಯಾಗುವುದರಲ್ಲೇ ವ್ಯಸ್ತರಾದರೆ, ಜನರು ಸಹಾಯಕ್ಕಾಗಿ ಯಾರ ಕಡೆ ನೋಡಬೇಕು?" ಎಂದು ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಮೊದಲು ಸಿದ್ದರಾಮಯ್ಯನವರಿಗೆ ಟ್ವೀಟ್ ಮೂಲಕ ಉತ್ತರ ನೀಡಿದ್ದ ಜೈಶಂಕರ್, "ನಾನು ನಿಮ್ಮ ಟ್ವೀಟ್ ನೋಡಿ ಗಾಬರಿಗೊಳಗಾಗಿದ್ದೇನೆ! ಈಗ ಹಲವು ಜೀವಗಳು ಅಪಾಯದಲ್ಲಿವೆ. ಇದನ್ನು ರಾಜಕೀಯವಾಗಿ ಬಳಸಬೇಡಿ. ಎಪ್ರಿಲ್ 14ರಿಂದ ಕದನ ಆರಂಭವಾಗಿದ್ದು, ಖರ್ತೋಮ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿ ಸುಡಾನ್‌ನಲ್ಲಿರುವ ಭಾರತೀಯರೊಡನೆ ಸತತ ಸಂಪರ್ಕದಲ್ಲಿದೆ" ಎಂದಿದ್ದರು.


ಜೈಶಂಕರ್ ಅವರು ಸಿದ್ದರಾಮಯ್ಯನವರ "31 ಜನ ಕರ್ನಾಟಕದ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದವರು ಅಂತರ್ಯುದ್ಧ ನಡೆಯುತ್ತಿರುವ ಸುಡಾನ್‌ನಲ್ಲಿ ಬಾಕಿಯಾಗಿದ್ದಾರೆ. ನಾನು ಪ್ರಧಾನಿಯವರಿಗೆ, ಗೃಹ ಸಚಿವರಿಗೆ, ವಿದೇಶಾಂಗ ಸಚಿವರಿಗೆ ಮತ್ತು ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಮಧ್ಯ ಪ್ರವೇಶಿಸಿ, ಅವರನ್ನು ಸುರಕ್ಷಿತವಾಗಿ ಮರಳಿ ಕರೆತರುವಂತೆ ಮನವಿ ಮಾಡುತ್ತೇನೆ" ಎಂದು ಟ್ವೀಟ್ ಮಾಡಿದ್ದರು.


ಸುಡಾನ್‌ನಲ್ಲಿ ಕಳೆದ ವಾರ ಸೇನೆ ಮತ್ತು ಶಕ್ತಿಶಾಲಿ ಮಿಲಿಟರಿ ಗುಂಪಾದ ರಾಪಿಡ್ ಸಪೋರ್ಟ್ ಫೋರ್ಸ್ (ಆರ್‌ಎಫ್ಎಸ್) ಮಧ್ಯೆ ಕದನ ಆರಂಭವಾಯಿತು. ಮಿಲಿಟರಿ ಸರ್ವಾಧಿಕಾರದಿಂದ ಪ್ರಜಾಪ್ರಭುತ್ವದ ಸ್ಥಾಪನೆಗೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಆರ್‌ಎಸ್ಎಫ್ ಅನ್ನು ಸೇನೆಗೆ ವಿಲೀನಗೊಳಿಸುವ ಆಗ್ರಹದಲ್ಲಿ ಈ ಕದನ ಆರಂಭವಾಯಿತು.


ಈದ್ ಕದನ ವಿರಾಮಕ್ಕೆ ಕರೆ


ಈ ಕದನ ಆರಂಭಗೊಂಡ ಕಳೆದೊಂದು ವಾರದಲ್ಲಿ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಇದನ್ನು ಕೊನೆಗೊಳಿಸುವಂತೆ ರಾಜತಾಂತ್ರಿಕ ಒತ್ತಡ ಹೆಚ್ಚುತ್ತಿದೆ. ವಿಶ್ವಸಂಸ್ಥೆ, ಅಮೆರಿಕಾ ಹಾಗೂ ಇತರ ರಾಷ್ಟ್ರಗಳು ಮುಸ್ಲಿಮರ ಹಬ್ಬವಾದ ಈದ್ ಉಲ್ ಫಿತರ್ ಅಂಗವಾಗಿ ಮೂರು ದಿನಗಳ ಮಟ್ಟಿಗಾದರೂ ಕದನ ವಿರಾಮ ಜಾರಿಗೆ ತರುವಂತೆ ಮಾಡಲು ಪ್ರಯತ್ನ ನಡೆಸುತ್ತಿವೆ.


ಆರ್‌ಎಸ್ಎಫ್ ಮಾನವೀಯತೆಯ ಆಧಾರದಲ್ಲಿ 72 ಗಂಟೆಗಳ ಕಾಲ ಕದನ ವಿರಾಮ ಘೋಷಿಸಲು ಸಿದ್ಧವಿರುವುದಾಗಿ ಹೇಳಿದ್ದು, ಸೇನೆಯ ವತಿಯಿಂದ ಈ ಕುರಿತು ಯಾವುದೇ ಹೇಳಿಕೆ ಬಂದಿಲ್ಲ. ಈ ಒಪ್ಪಂದ ಶುಕ್ರವಾರ 06:00 ಗಂಟೆಯಿಂದ ಹಬ್ಬದ ಅಂಗವಾಗಿ ಜಾರಿಗೆ ಬರಲಿದೆ ಎಂದು ಆರ್‌ಎಸ್ಎಫ್ ಹೇಳಿದೆ. ಆದರೂ ರಾಜಧಾನಿ ಖರ್ತೋಮ್‌ನಲ್ಲಿ ಗುಂಡಿನ ಮೊರೆತ ಮತ್ತು ಸ್ಫೋಟದ ಶಬ್ದಗಳು ಇನ್ನೂ ಕೇಳುತ್ತಿವೆ. ಇದಕ್ಕೆ ಮೊದಲಿನ ಎರಡು ಕದನ ವಿರಾಮ ಪ್ರಯತ್ನಗಳೂ ವೈಫಲ್ಯ ಕಂಡಿವೆ.


ಕದನದ ಕಾರಣ


ಸುಡಾನ್‌ನಲ್ಲಿ ಈಗ ಎಲ್ಲವೂ ಎರಡು ಗುಂಪುಗಳ ನಡುವಿನ ಸಮರದ ಕೇಂದ್ರಿತವಾಗಿವೆ. ಆ ಗುಂಪುಗಳೆಂದರೆ, ಸುಡಾನೀ ಸೇನೆ ಮತ್ತು ಆರ್‌ಎಸ್ಎಫ್. 2021ರ ದಂಗೆಯ ಬಳಿಕ, ಸುಡಾನ್ ಅಸಮರ್ಥ ನಾಯಕ ಜನರಲ್ ಅಬ್ದೆಲ್ ಫತ್ತಾ ಬುರ್ಹಾನ್ ನೇತೃತ್ವದ ಮಿಲಿಟರಿ ಆಡಳಿತ ಹೊಂದಿದೆ. ಆ ದಂಗೆಯ ಹಿಂದೆ ಆತನದ್ದೇ ಕೈವಾಡವಿತ್ತು. ಎರಡು ವರ್ಷಗಳ ಹಿಂದೆ, ದೀರ್ಘಕಾಲ ಸುಡಾನನ್ನು ಆಳಿದ ಸರ್ವಾಧಿಕಾರಿ ಒಮರ್ ಅಲ್ ಬಾಷಿರ್ ಅವರನ್ನು ಅಧಿಕಾರದಿಂದ ಹೊರಹಾಕಲಾಯಿತು.


ಆರ್‌ಎಸ್ಎಫ್‌ಗೆ ಜನರಲ್ ಮೊಹಮ್ಮದ್ ಹಮ್ದಾನ್ ಡಗಾಲೋ ಅಥವಾ ಹೆಮೆಡ್ಟಿ ನೇತೃತ್ವ ವಹಿಸಿದ್ದು, ಆತ ಸುಡಾನ್ ಸೇನೆಯೊಡನೆ ಕಾರ್ಯ ನಿರ್ವಹಿಸಿದ್ದರು. ಬಾಷಿರ್ ಅವರನ್ನು ಅಧಿಕಾರದಿಂದ ತೆಗೆದ ಬಳಿಕ, 2023ರ‌ ಕೊನೆಯಲ್ಲಿ ಚುನಾವಣೆ ಎದುರಿಸಲಿದ್ದ ಸುಡಾನಿನ ರಾಜಕೀಯ ಹಾದಿಯನ್ನು ಬದಲಾಯಿಸಲು ಯೋಜನೆಗಳನ್ನು ಹಾಕಿಕೊಳ್ಳಲಾಯಿತು. ಬುರ್ಹಾನ್ ನಿಧಾನವಾಗಿ, ಆದರೆ ಬದಲಾಯಿಸಲಾಗದಂತಹ ನಾಗರಿಕ ಆಡಳಿತವನ್ನು ಜಾರಿಗೆ ತರುವ ಭರವಸೆ ನೀಡಿದ್ದರು. ಆದರೆ ಈಗ ಅವಲೋಕಿಸಿದಾಗ ಬುರ್ಹಾನ್ ಆಗಲಿ, ಡಗಾಲೋ ಆಗಲಿ ಅಧಿಕಾರ ಬಿಟ್ಟುಕೊಡಲು ಸಿದ್ಧವಿರುವಂತೆ ಕಾಣುತ್ತಿಲ್ಲ. ಆದ್ದರಿಂದಲೇ ಅನಿವಾರ್ಯವಾಗಿ ಅಧಿಕಾರದ ಕದನ ಎಪ್ರಿಲ್ 15, 2023ರಂದು ಆರಂಭಗೊಂಡಿದೆ.


ಅಂದಿನಿಂದ ಆರ್‌ಎಸ್ಎಫ್ ಮತ್ತು ಸುಡಾನ್ ಸೇನಾಪಡೆಗಳು ರಾಜಧಾನಿ ಖರ್ತೋಮ್ ಮತ್ತು ದೇಶಾದ್ಯಂತ ಕದನ ಆರಂಭಿಸಿವೆ. ಕಳೆದ ಕೆಲ ದಿನಗಳಲ್ಲಿ ಹಿಂಸಾಚಾರ ಮಿತಿಮೀರಿದೆ.


ಇತ್ತೀಚಿನ ಅಧಿಕಾರದ ಕದನದ ಹಿಂದೆ ಆರ್‌ಎಸ್ಎಫ್ ಅರೆಸೇನಾಡೆಯನ್ನು ಸುಡಾನಿನ ಸೇನೆಗೆ ಅಂತರ್ಗತಗೊಳಿಸುವ ಕುರಿತ ಭಿನ್ನಾಭಿಪ್ರಾಯಗಳೂ ಕಾರಣವಾಗಿವೆ. ಸೇನೆಯ ಸಮ್ಮತಿಯಿಲ್ಲದೆ ಆರ್‌ಎಸ್ಎಫ್ ತನ್ನ ಸದಸ್ಯರನ್ನು ರಾಜಧಾನಿಗೆ ಮತ್ತು ದೇಶಾದ್ಯಂತ ಕಳುಹಿಸತೊಡಗಿದಾಗ ಸಮಸ್ಯೆಗಳು ಬಿಗಡಾಯಿಸಿದವು. ಆದರೆ ಹಿಂಸಾಚಾರಕ್ಕೆ ಬೇರೆಯೇ ಮೂಲ ಕಾರಣಗಳಿದ್ದವು. ಅದರಲ್ಲೂ ಆರ್‌ಎಸ್ಎಫ್ ಸುಡಾನಿನ ಆರ್ಥಿಕ ಸಂಪನ್ಮೂಲಗಳ ಮೇಲೆ, ವಿಶೇಷವಾಗಿ ಚಿನ್ನದ ಗಣಿಗಳ ಮೇಲೆ ನಿಯಂತ್ರಣ ಸಾಧಿಸಿದೆ. ಸುಡಾನ್‌ನಲ್ಲಿ ನಡೆಯುತ್ತಿರುವ ಘಟನೆಗಳು ಆ ದೇಶದಲ್ಲಿ ಸ್ಥಿರತೆ ಸಾಧಿಸಲು ಅಥವಾ ಪ್ರಜಾಪ್ರಭುತ್ವದ ಸರ್ಕಾರ ತರಲು ಖಂಡಿತವಾಗಿಯೂ ಪೂರಕವಾಗಿಲ್ಲ.


ಇಬ್ಬರು ಶಕ್ತಿಶಾಲಿಗಳ ಕದನ


ಡಗಾಲೋ 2000ನೇ ದಶಕದ ಆರಂಭದಲ್ಲಿ ಆರ್‌ಎಸ್ಎಫ್ ಅಧಿಕಾರ ಪಡೆದುಕೊಂಡ. ಆತ ದಾರ್ಫರ್ ಪ್ರಾಂತ್ಯದಲ್ಲಿ ಮಾನವ ಹಕ್ಕು ದಮನ ನಡೆಸಿದ ಜಂಜವೀಡ್ ದಾಳಿಕೋರ ತಂಡದ ನೇತೃತ್ವ ವಹಿಸಿದ್ದ.


ಸುಡಾನ್ ಅಧ್ಯಕ್ಷ ಬಾಷಿರ್ ಸಹ ದರ್ಫುರ್ ಜನರ ಮೇಲೆ ಹಿಂಸಾಚಾರ ನಡೆಸಿದ್ದ. ಆತನ ವಿರುದ್ಧ ಮತ್ತು ಜಂಜವೀಡ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಮಾನವತೆಯ ವಿರುದ್ಧದ ಅಪರಾಧ ಎಂದು ಆರೋಪ ಹೊರಿಸಿತು. ಆ ಬಳಿಕ ಡಗಾಲೋ ಹೆಜ್ಜೆ ಮುಂದಿಡತೊಡಗಿದ.


ಆರ್‌ಎಸ್ಎಫ್ ನಾಯಕನಾಗಿ, ಡಗಾಲೋ ಮೇಲೆ ಪ್ರಜಾಪ್ರಭುತ್ವ ಪರ ಹೋರಾಟಗಾರರ ಮೇಲೆ ಹಲ್ಲೆ ನಡೆಸಿದ ಆರೋಪಗಳಿವೆ. 2019ರಲ್ಲಿ 120 ಪ್ರತಿಭಟನಾಕಾರರನ್ನು ಹತ್ಯೆಗೈಯಲಾಯಿತು.


ಬುರ್ಹಾನ್ ನಡೆಗಳೂ ಆತನ ವಿರುದ್ಧ ಮಾನವ ಹಕ್ಕು ಸಂಸ್ಥೆಗಳು ಆರೋಪ ಹೊರಿಸುವಂತೆ ಮಾಡಿದ್ದವು. ಆಡಳಿತ ನಡೆಸುತ್ತಿದ್ದ ಸೇನಾ ಮುಖ್ಯಸ್ಥನಾಗಿ, ಸರ್ಕಾರದ ಮುಖಂಡನಾಗಿ ಆತ ಕಳೆದ ಎರಡು ವರ್ಷಗಳಿಂದ ಪ್ರಜಾಪ್ರಭುತ್ವವಾದಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾನೆ.


ಬುರ್ಹಾನ್ ಮತ್ತು ಡಗಾಲೋ ಇಬ್ಬರೂ ನಾಗರಿಕ ಪ್ರಜಾಪ್ರಭುತ್ವದೆಡೆಗೆ ಸುಡಾನ್ ನಡೆಯುವುದನ್ನು ತಡೆಯುತ್ತಿದ್ದಾರೆ. ಆದರೆ ಇದು ನೈಜವಾಗಿ ವೈಯಕ್ತಿಕ ಅಧಿಕಾರಕ್ಕೋಸ್ಕರ ನಡೆಯುತ್ತಿರುವ ಸಮರವಾಗಿದೆ.


"ಆನೆಗಳು ಕಾದಾಡುವಾಗ ಹುಲ್ಲು ಕಿತ್ತುಬರುತ್ತದೆ" ಎನ್ನುವ ಆಫ್ರಿಕನ್ ಗಾದೆ ಇಲ್ಲಿ ನಿಜವಾಗುವಂತೆ ಕಂಡುಬರುತ್ತಿದೆ.


-ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ


 https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.