ಜಲಾಲಾಬಾದ್: ಆಫ್ಘಾನಿಸ್ತಾನದ ಜಲಾಲಾಬಾದ್ ನಲ್ಲಿ ಸಿಖ್ ಮತ್ತು ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸಿರುವ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ. ಅಫ್ಘಾನಿಸ್ತಾನದ ಜಲಾಲಾಬಾದ್ ನಗರದಲ್ಲಿ ಭಾನುವಾರ ಸಂಭವಿಸಿದ ಆತ್ಮಾಹುತಿ ಬಾಂಬ್ ದಾಳಿಗೆ ಕನಿಷ್ಠ 19 ಮಂದಿ ಬಲಿಯಾಗಿದ್ದಾರೆ. 19 ಮಂದಿಯ ಪೈಕಿ 17 ಮಂದಿ ಹಿಂದೂಗಳು ಮತ್ತು ಸಿಖ್ಖರಿದ್ದಾರೆ. ಇನ್ನೂ 20 ಮಂದಿ ಗಾಯಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಸಿಖ್ ಮತ್ತು ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸಿರುವ ಈ ಆತ್ಮಾಹುತಿ ಬಾಂಬ್ ದಾಳಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, 'ನಿನ್ನೆ ಅಫ್ಘಾನಿಸ್ತಾನದಲ್ಲಿ ನಡೆದಿರುವ ಭಯೋತ್ಪಾದಕರ ದಾಳಿಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಅಫ್ಘಾನಿಸ್ತಾನದ ಬಹುಸಂಸ್ಕೃತಿಯ ಮೇಲೆ ನಡೆಸಿರುವ ದಾಳಿ ಇದಾಗಿದೆ. ಭಾರತವು ಅಫ್ಘಾನಿಸ್ತಾನಕ್ಕೆ ಸಹಕಾರ ನೀಡಲು ಸಿದ್ಧವಿದೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ' ಎಂದು ತಿಳಿಸಿದ್ದಾರೆ.



ಅಧ್ಯಕ್ಷ ಅಶ್ರಫ್ ಘನಿ ಅವರನ್ನು ಭೇಟಿ ಮಾಡುವ ಸಲುವಾಗಿ ವಾಹನವೊಂದರಲ್ಲಿ ತೆರಳುತ್ತಿದ್ದ ಸಿಖ್ಖರ ತಂಡವನ್ನು ಗುರಿಯಾಗಿಸಿ ಈ ಬಾಂಬ್ ದಾಳಿ ನಡೆದಿದೆ.



ಈ ದಾಳಿಯನ್ನು ತಾನೇ ನಡೆಸಿರುವುದಾಗಿ ಇಸ್ಲಾಮಿಕ್ ಸ್ಟೇಟ್ ಹೇಳಿಕೆ ನೀಡಿದೆ. ಅಫ್ಘಾನಿಸ್ತಾನದ ಪೂರ್ವ ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ 11 ಮಂದಿ ಸಿಖ್ಖರ ಹೆಸರನ್ನು ದೆಹಲಿ ಸಿಖ್ ಗುರುದ್ವಾರಾ ಮ್ಯಾನೇಜ್ಮೆಂಟ್ ಕಮಿಟಿಯಿಂದ ಬಿಡುಗಡೆಯಾಗಿದೆ.



ಮೃತ ಕುಟುಂಬದವರಿಗೆ ಸಂತಾಪ ಸೂಚಿಸಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.