ಇಂದು ವರ್ಷದ ಮೊದಲ ಸೂರ್ಯ ಗ್ರಹಣ
ನಾಸಾ ಪ್ರಕಾರ, ಬರಿಗಣ್ಣಿಗೆ ಭಾಗಶಃ ಅಥವಾ ಸಂಪೂರ್ಣ ಸೂರ್ಯ ಗ್ರಹಣವನ್ನು ನೋಡುವುದು ಸುರಕ್ಷಿತವಲ್ಲ.
ನವದೆಹಲಿ: ಇತ್ತೀಚೆಗಷ್ಟೇ ಗೋಚರಿಸಿದ ವಿಶೇಷ ಚಂದ್ರಗ್ರಹಣದ ನಂತರ ವರ್ಷದ ಮೊದಲ ಸೂರ್ಯಗ್ರಹಣವನ್ನು ಇಂದು ನಾವು ನೋಡಲಿದ್ದೇವೆ. ಅಮೇರಿಕಾ, ಬ್ರೆಜಿಲ್, ಉರುಗ್ವೆ ಸೇರಿದಂತೆ ವಿಶ್ವದ ಅನೇಕ ಭಾಗಗಳಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ. ಗ್ರಹಣದ ಪ್ರಭಾವ ಭಾರತದ ಮೇಲೆ ಉಂಟಾಗುತ್ತದೆಯಾದರೂ ಗ್ರಹಣವನ್ನು ನೋಡುವುದು ಮಾತ್ರ ಅಸಾಧ್ಯ. ಈ ಘಟನೆ ಸಂಭವಿಸುತ್ತಿರುವುದು ಮೊದಲ ಬಾರಿ ಅಲ್ಲದಿದ್ದರೂ ಸಹ ಜನರಲ್ಲಿ ಈ ಬಗ್ಗೆ ಕುತೂಹಲವಿದೆ.
ಇಂದು ಸಂಭವಿಸಲಿದೆ ಭಾಗಶಃ ಸೂರ್ಯ ಗ್ರಹಣ
ಫೆಬ್ರವರಿ 15, 2018 ರಂದು ಸಂಭವಿಸುವ ಈ ಸೌರ ಗ್ರಹಣವು ಭಾಗಶಃ ಸೌರ ಗ್ರಹಣವಾಗಿದೆ. ಪ್ರಪಂಚದ ಕೆಲವು ಆಯ್ದ ರಾಷ್ಟ್ರಗಳಲ್ಲಿ ಮಾತ್ರ ಇದನ್ನು ಕಾಣಬಹುದು. ಭಾರತೀಯ ಸಮಯದ ಪ್ರಕಾರ, ಇಂದು ಪ್ರಾರಂಭವಾಗುವ ಸೌರ ಗ್ರಹಣವು ಫೆಬ್ರುವರಿ 15 ರ ರಾತ್ರಿ 12.25 ಕ್ಕೆ ಆರಂಭವಾಗಲಿದೆ ಮತ್ತು ಬೆಳಿಗ್ಗೆ ಸುಮಾರು ನಾಲ್ಕು ಗಂಟೆಯ ವೇಳೆಗೆ ಗ್ರಹಣ ಮುಕ್ತಾಯವಾಗಲಿದೆ. ದಕ್ಷಿಣ ಖಗೋಳಾರ್ಧದ ಭಾಗಗಳಲ್ಲಿ ಈ ಖಗೋಳ ವಿದ್ಯಮಾನವನ್ನು ಕಾಣಬಹುದು. ಇದರ ಅಡಿಯಲ್ಲಿ, ಅಟ್ಲಾಂಟಿಕ್ ಮಹಾಸಾಗರದ ದಕ್ಷಿಣದ ಭಾಗಗಳು ಮತ್ತು ದಕ್ಷಿಣ ಅಮೆರಿಕಾದ ದಕ್ಷಿಣ ಭಾಗದ ಅಂಟಾರ್ಟಿಕಾದಲ್ಲಿ ಇದನ್ನು ಕಾಣಬಹುದು. ಇದು ಭಾಗಶಃ ಸೌರ ಗ್ರಹಣವಾಗಿದ್ದು, ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಇದರ ನಂತರ, ಈ ವರ್ಷದ ಆಗಸ್ಟ್ 11 ರಂದು ಮುಂದಿನ ಸೂರ್ಯ ಗ್ರಹಣ ಗೋಚರಿಸಲಿದೆ. ಇದೂ ಸಹ ಭಾರತಕ್ಕೆ ಅಗೋಚರ ಸೂರ್ಯಗ್ರಹಣ.