`ಮಲಾಲಾ` ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿ ಅಮೇರಿಕಾದ ಡ್ರೋನ್ ದಾಳಿಯಲ್ಲಿ ಸಾವು
ವಾಷಿಂಗ್ಟನ್: ಮಲಾಲಾ ಮೇಲೆ ಗುಂಡು ಹಾರಿಸಿದ್ದ ಮೌಲಾನಾ ಫಾಜ್ಳುಲ್ಲಾ ಎನ್ನುವ ವ್ಯಕ್ತಿ ಅಮೇರಿಕಾದ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಆಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಧೃಡಪಡಿಸಿದೆ.
ಪಾಕಿಸ್ತಾನದ ಸ್ವಾತ್ ಜಿಲ್ಲೆಯಲ್ಲಿ 2009 ರಿಂದಲೂ ಭಯೋತ್ಪಾದನೆಯ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ನಿನ್ನೆ ಅಮೆರಿಕಾವು ಉಗ್ರರನ್ನು ಗುರಿಯಾಗಿಸಿಕೊಂಡು ಆಫ್ಘಾನಿಸ್ತಾನದಲ್ಲಿ ಕೈಗೊಂಡಿದ್ದ ಡ್ರೋನ್ ಕಾರ್ಯಾಚರಣೆಯ ವೇಳೆಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ಮೂಲಗಳ ಪ್ರಕಾರ ಡ್ರೋನ್ ದಾಳಿಯನ್ನು ಆಫ್ಘಾನಿಸ್ತಾನದ ದಂಗಂ ಜಿಲ್ಲೆಯ ನೂರ್ ಗುಲ್ ಕಲಾಯ್ ಗ್ರಾಮದಲ್ಲಿ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.ಈ ವೇಳೆ ಫಾಜ್ಳುಲ್ಲಾ ಸೇರಿ ಇತರ ನಾಲ್ಕು ಉಗ್ರರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
2012 ರಲ್ಲಿ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯುಸೂಫಾಜೈ ರನ್ನು ಹತ್ಯೆಗೈಯಲು ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ.