75 ಅಡಿ ಎತ್ತರ, 56 ಟನ್ ತೂಕದ ಸೇತುವೆ ರಾತ್ರೋ ರಾತ್ರಿ ಮಾಯವಾದಾಗ..!
ಈ ಸೇತುವೆಯ ಮಧ್ಯಭಾಗವನ್ನು 75 ಅಡಿ ಎತ್ತರದಿಂದ ಕದಿಯಲಾಗಿದೆ ಎಂದು ಸ್ಥಳೀಯ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಸ್ಥಳೀಯ ಪೊಲೀಸರು ಕಾಣೆಯಾದ ಸೇತುವೆಯ ಭಾಗವನ್ನು ಹುಡುಕಲು ಪ್ರಾರಂಭಿಸಿದ್ದಾರೆ.
ನವದೆಹಲಿ: ಈ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸೇತುವೆಯ ಚಿತ್ರವೊಂದು ಬಹಳ ಬೇಗ ವೈರಲ್ ಆಗುತ್ತಿದೆ. ಸೇತುವೆಯ ಮಧ್ಯಭಾಗ ಕಣ್ಮರೆಯಾಗಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ರಾತ್ರೋ ರಾತ್ರಿ ಈ ಸೇತುವೆಯ ಮಧ್ಯಭಾಗ ಮಾಯವಾಗಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗತೊಡಗಿದೆ. ವಾಸ್ತವವಾಗಿ, ಈ ಸೇತುವೆಯ ಮಧ್ಯಭಾಗವನ್ನು 75 ಅಡಿ ಎತ್ತರದಿಂದ ಕದಿಯಲಾಗಿದೆ ಎಂದು ಸ್ಥಳೀಯ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಸ್ಥಳೀಯ ಪೊಲೀಸರು ಕಾಣೆಯಾದ ಸೇತುವೆಯ ಭಾಗವನ್ನು ಹುಡುಕಲು ಪ್ರಾರಂಭಿಸಿದ್ದಾರೆ.
ಅದಾಗ್ಯೂ, ಬರೋಬ್ಬರಿ 75 ಅಡಿ ಎತ್ತರ, 56 ಟನ್ ತೂಕದ ಸೇತುವೆಯನ್ನು ರಾತ್ರೋ ರಾತ್ರಿ ಯಾರಾದರೂ ಅಪಹರಿಸಬಹುದೇ ಎಂಬ ಅನುಮಾನವೂ ಒಂದೆಡೆ ಮೂಡಿದೆ. ಮೇ 16 ರಂದು ಸೇತುವೆ ಮುರಿದಿತ್ತು ಎನ್ನಲಾಗಿದ್ದು, ಇದನ್ನು ಗಮನಿಸಿದ್ದ ಯಾರೋ ಕಳ್ಳರು ಇಂತಹ ಕೃತ್ಯ ಎಸಗಿರಬಹುದು ಎಂಬುದು ಹಲವರ ಅಭಿಪ್ರಾಯವಾಗಿದೆ.
ರಷ್ಯಾದ ಮರ್ಮನ್ಸ್ಕ್ ನಲ್ಲಿ ಈ ಘಟನೆ ಸಂಭವಿಸಿದ್ದು, ಮೇ 26 ರಂದು ಇದು ಬೆಳಕಿಗೆ ಬಂದಿದೆ. ಆರಂಭಿಕ ತನಿಖೆಯಲ್ಲಿ ಸೇತುವೆ ಅಪಹರಿಸಲ್ಪಟ್ಟಿದೆ ಎಂದು ಪೊಲೀಸರು ತಿರಸ್ಕರಿಸಿದರು. ಆದರೆ, ಸೇತುವೆಯ ಮಧ್ಯಭಾಗ ಆಕಸ್ಮಿಕವಾಗಿ ಮುರಿದಿದ್ದರೆ ಅದು ನೀರಿನಲ್ಲಿ, ಗೋಚರಿಸಬೇಕಿತ್ತಲ್ಲವೇ? ಅಂತಹ ಯಾವುದೇ ತುಣುಕು ನೀರಿನಲ್ಲಿ ಕಾಣಸಿಗುತ್ತಿಲ್ಲ. ಜೊತೆಗೆ ನೀರಿನ ಹರಿವು ಕೂಡ ತುಂಬಾ ವೇಗವಾಗಿಲ್ಲ. ಹಾಗಾಗಿ ಭಾರೀ ತೂಕದ ಲೋಹದ ಸೇತುವೆಯನ್ನು ಮಾರಾಟ ಮಾಡುವ ಸಲುವಾಗಿಯೇ ಯಾರೋ ಕದ್ದಿರಬೇಕು ಎಂಬ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತಮ್ಮ ತನಿಖೆ ಮುಂದುವರೆಸಿದ್ದಾರೆ.