ಅಮೇರಿಕಾದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಟ್ರಂಪ್
ಅಕ್ರಮ ವಲಸೆ ತಡೆಯಲು ಮೆಕ್ಸಿಕೊ ಗಡಿಯಲ್ಲಿ ಬೃಹತ್ ಗೋಡೆ ನಿರ್ಮಾಣಕ್ಕೆ ಮುಂದಾದ ಯುಎಸ್.
ವಾಷಿಂಗ್ಟನ್: ಅಮೇರಿಕಾ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ಶುಕ್ರವಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ದೇಶದ ರಕ್ಷಣೆಗಾಗಿ ಅಕ್ರಮ ವಲಸೆ ತಡೆಯುವುದು ಅವಶ್ಯಕ ಎಂದಿರುವ ಟ್ರಂಪ್, ಅಮೆರಿಕದೊಳಗೆ ನುಸುಳುವ ಅಕ್ರಮ ವಲಸೆಕೋರರನ್ನು ನಿಯಂತ್ರಿಸಲು ಮೆಕ್ಸಿಕೊ ಗಡಿಯಲ್ಲಿ ಬೃಹತ್ ಗೋಡೆ ನಿರ್ಮಿಸಲು ನಿರ್ಧರಿಸಿದ್ದಾರೆ.
ಅಕ್ರಮ ವಲಸಿಗರು, ಅಪರಾಧಿಗಳು ಮತ್ತು ಮಾದಕವಸ್ತುಗಳ ಕಳ್ಳಸಾಗಾಣಿಕೆದಾರರಿಂದ ದೇಶವನ್ನು ರಕ್ಷಿಸಲು ತುರ್ತುಸ್ಥಿತಿಯನ್ನು ಘೋಷಿಸುವ ಹಂತವು ಅತ್ಯವಶ್ಯಕವಾಗಿದೆ ಎಂದು ರಾಷ್ಟ್ರಪತಿ ರೋಸ್ ಗಾರ್ಡನ್ ವರದಿಗಾರರಿಗೆ ತಿಳಿಸಿದ್ದಾರೆ. ಟ್ರಂಪ್ ನ ಈ ಕ್ರಮವನ್ನು ಟೀಕಿಸಿರುವ ಡೆಮೋಕ್ರಾಟ್ ಹಕ್ಕು ಸಂಘಟನೆಗಳು ಇದು ಅಕ್ರಮ ಮತ್ತು ಸಂವಿಧಾನಾತ್ಮಕ ಅಧಿಕಾರಗಳ ದುರುಪಯೋಗವೆಂದು ಆರೋಪಿಸಿದ್ದಾರೆ.
ಅಕ್ರಮ ವಲಸೆ ತಡೆಯಲು ಮೆಕ್ಸಿಕೋ ಗಡಿಯಲ್ಲಿ ಬೃಹತ್ ಗೋಡೆ ನಿರ್ಮಿಸಲು ಉದ್ದೇಶಿಸಿರುವ ಟ್ರಂಪ್, ಇದಕ್ಕಾಗಿ ನಿಧಿ ಸಂಗ್ರಹಿಸಲು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯನ್ನು ಗೋಡೆ ನಿರ್ಮಾಣಕ್ಕೆ ವಿನಿಯೋಗಿಸಲು ಉದ್ದೇಶಿಸಿದ್ದಾರೆ. ಆದರೆ ಇದಕ್ಕೆ ಸಂಸತ್ತಿನ ಅನುಮೋದನೆ ಪಡೆಯುವುದು ಕಡ್ಡಾಯ. ಆದರೆ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿರುವುದರಿಂದ ಸಂಸತ್ತಿನ ಅನುಮೋದನೆ ಪಡೆಯುವ ಅವಶ್ಯಕತೆ ಇರುವುದಿಲ್ಲ.