ಉಗ್ರ ಮಸೂದ್ ನಿರ್ಬಂಧಕ್ಕೆ ವಿಶ್ವಸಂಸ್ಥೆಯಲ್ಲಿ ಯುಎಸ್, ಯುಕೆ, ಫ್ರಾನ್ಸ್ ಒತ್ತಾಯ
ಉಗ್ರ ಮಸೂದ್ ಅಜರ್ನನ್ನು ಕಪ್ಪು ಪಟ್ಟಿಗೆ ಸೇರಿಸುವುದು, ಜಾಗತಿಕ ಪ್ರವೇಶಕ್ಕೆ ನಿಷೇಧ ಹೇರುವುದು ಸೇರಿದಂತೆ ಆತನಿಗೆ ಸೇರಿದ ಸ್ವತ್ತುಗಳನ್ನು ಮುಟ್ಟುಗೋಲು ಹಾಕುವಂತೆ ಮಾಡಲು ಮೂರನೇ ಬಾರಿಗೆ ಪ್ರಯತ್ನ ನಡೆದಿದೆ.
ವಿಶ್ವಸಂಸ್ಥೆ: ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಅಮೆರಿಕ, ಯುನೈಟೆಡ್ ಕಿಂಗ್ಡಮ್ ಮತ್ತು ಫ್ರಾನ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಒತ್ತಾಯಿಸಿದ್ದಾರೆ.
15 ರಾಷ್ಟ್ರಗಳ ಭದ್ರತಾ ಮಂಡಳಿಯ ಮೂವರು ಶಾಶ್ವತ ವೀಟೋ-ಚಾಲಿತ ಸದಸ್ಯರು ಹೊಸ ಪ್ರಸ್ತಾಪವನ್ನ ಇಂದು ಸಲ್ಲಿಸಿದ್ದಾರೆ. ಈ ಮೂವರು ಸದಸ್ಯ ರಾಷ್ಟ್ರಗಳು ಸಲ್ಲಿಸಿದ ಹೊಸ ಪ್ರಸ್ತಾಪವನ್ನು 10 ದಿನಗಳ ಒಳಗೆ ಭದ್ರತಾ ಮಂಡಳಿ ಪರಿಶೀಲನೆ ನಡೆಸಲಿದೆ.
ಉಗ್ರ ಮಸೂದ್ ಅಜರ್ನನ್ನು ಕಪ್ಪು ಪಟ್ಟಿಗೆ ಸೇರಿಸುವುದು,, ಜಾಗತಿಕ ಪ್ರವೇಶಕ್ಕೆ ನಿಷೇಧ ಹೇರುವುದು ಸೇರಿದಂತೆ ಆತನಿಗೆ ಸೇರಿದ ಸ್ವತ್ತುಗಳನ್ನು ಮುಟ್ಟುಗೋಲು ಹಾಕುವಂತೆ ಮಾಡಲು ಮೂರನೇ ಬಾರಿಗೆ ಪ್ರಯತ್ನ ನಡೆದಿದೆ. ಈ ಮೂಲಕ ಮಸೂದ್ ಅಜರ್ನನ್ನು 'ಜಾಗತಿಕ ಭಯೋತ್ಪಾದಕ' ಎಂದು ಸಾರುವಂತೆ ಒತ್ತಾಯಿಸಿ ಸಲ್ಲಿಕೆಯಾದ ಪ್ರಸ್ತಾವನೆಯಲ್ಲಿ ಇದು ನಾಲ್ಕನೇಯದಾಗಿದೆ.
ಈ ಹಿಂದೆ 2009, 2016 ಹಾಗೂ 2017ರಲ್ಲಿ ಇದೇ ಪ್ರಸ್ತಾಪವನ್ನು ಭಾರತ ಸೇರಿ ಅನೇಕ ರಾಷ್ಟ್ರಗಳು ಮುಂದಿಟ್ಟಾಗ ಚೀನಾ ಅಡ್ಡಗಾಲು ಹಾಕಿತ್ತು. ಈ ಬಾರಿಯೂ ಚೀನಾ ತಗಾದೆ ತೆಗೆಯಲಿದೆ ಎಂದು ರಾಜತಾಂತ್ರಿಕರು ಅಭಿಪ್ರಾಯ ಪಟ್ಟಿದ್ದಾರೆ.
ಫೆಬ್ರವರಿ 14 ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ನಮ್ಮ 40 ಸಿಆರ್ಪಿಎಫ್ ಯೋಧರು ಹುತಾತ್ಮರಾದರು. ಈ ಪೈಶಾಚಿಕ ಕೃತ್ಯಕ್ಕೆ ಕಾರಣವಾಗಿದ್ದ ಜೆಎಎಂ ಸಂಘಟನೆ ವಿರುದ್ಧ ಫೆಬ್ರವರಿ 25 ರ ಮಧ್ಯರಾತ್ರಿ ಇಂಡಿಯನ್ ಆರ್ಮಿ ಏರ್ಸ್ಟ್ರೈಕ್ ನಡೆಸಿತ್ತು. ಈ ದಾಳಿಯಲ್ಲಿ 300 ಉಗ್ರರನ್ನು ಹತ್ಯೆಗೈಯಲಾಗಿತ್ತು. ಇದೀಗ ಮಸೂದ್ ಅಜರ್ನನ್ನು ಗ್ಲೋಬಲ್ ಟೆರರಿಸ್ಟ್ ಎಂದು ಘೋಷಣೆ ಮಾಡುವಂತೆ ಯುಎಸ್, ಯುಕೆ ಹಾಗೂ ಫ್ರಾನ್ಸ್ ವಿಶ್ವಸಂಸ್ಥೆಗೆ ಒತ್ತಾಯಿಸಿವೆ.