ಇಂಡೋನೆಷ್ಯಾ: ಗ್ರಾಮಸ್ಥರ ಗುಂಪೊಂದು ಸುಮಾರು 300 ಮೊಸಳೆಗಳನ್ನು ಹತ್ಯೆ ಮಾಡಿದ ಘಟನೆ ಇಂಡೋನೇಷ್ಯಾ ಪ್ರಾಂತ್ಯದ ಪಶ್ಚಿಮ ಪಪುವಾದ ಅಭಯಾರಣ್ಯದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಅಲ್ಲಿನ ಸ್ಥಳೀಯ ವ್ಯಕ್ತಿ ಸುಗಿಟೋ(48) ಎಂಬಾತನನ್ನು ಮೊಸಳೆಯೊಂದು ಕೊಂದಿದ್ದರ ಪ್ರತೀಕಾರವಾಗಿ ಗ್ರಾಮಸ್ಥರು ಸುಮಾರು 300 ಮೊಸಳೆಗಳನ್ನು ಕೊಂದಿದ್ದಾರೆ ಎನ್ನಲಾಗಿದೆ. ಮೊಸಳೆಗಳ ಮಾರಣಹೋಮ ತಡೆಯಲು ತಡೆಯಲು ಪ್ರಯತ್ನಿಸಲಾಯಿತಾದರೂ ಅದು ಸಾಧ್ಯವಾಗಲಿಲ್ಲ ಎಂದಿರುವ ಅರಣ್ಯ ಅಧಿಕಾರಿಗಳು, ಸದ್ಯ ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸುವುದಾಗಿ ಹೇಳಿದ್ದಾರೆ.


ಸಂರಕ್ಷಿತಾ ಪ್ರಾಣಿಗಳನ್ನು ಕೊಲ್ಲುವುದು ಇಂಡೋನೆಷ್ಯಾದಲ್ಲಿ ಮಹಾ ಅಪರಾಧವಾಗಿದ್ದು, ತಪ್ಪಿತಸ್ಥರಿಗೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲಾಗುತ್ತದೆ. 


ಮೊಸಳೆ ಸಂತಾನೋತ್ಪತ್ತಿ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ತರಕಾರಿಗಳನ್ನು ಒಟ್ಟುಗೂಡಿಸುತ್ತಿದ್ದ ಸ್ಥಳೀಯ ಗ್ರಾಮಸ್ಥನ ಮೇಲೆ ಮೊಸಳೆಯೊಂದು ದಾಳಿ ನಡೆಸಿದ ಪರಿಣಾಮ ಆತ ಮೃತಪಟ್ಟಿದ್ದ. ಆದರೆ, ಶನಿವಾರ ಆತನ ಅಂತ್ಯಕ್ರಿಯೆಯ ನಂತರ ಉದ್ರಿಕ್ತಗೊಂಡ ಗ್ರಾಮಸ್ಥರು ಚಾಕು, ಮಚ್ಚು, ಸುತ್ತಿಗೆ, ಕೋಲುಗಳನ್ನು ಹಿಡಿದು ಅಭಯಾರಣ್ಯಕ್ಕೆ ನುಗ್ಗಿ, ಮೊದಲು ಮೊಸಳೆ ಕೃಷಿ ಕಚೇರಿ ದಾಳಿ ನಡೆಸಿ, ನಂತರ ಅಲ್ಲಿದ್ದ ಮೊಸಳೆಗಳನ್ನೂ ಕೊಂದಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.


ಈ ಕೇಂದ್ರವು ರಕ್ಷಿತ ಉಪ್ಪುನೀರು ಮತ್ತು ನ್ಯೂ ಗಿನಿಯಾ ಮೊಸಳೆಗಳನ್ನು ಸಂರಕ್ಷಿಸಲು ಮತ್ತು ಕೆಲವು ಪ್ರಾಣಿಗಳ ಸಂತಾನೋತ್ಪತ್ತಿಗಾಗಿ ಪರವಾನಗಿ ಪಡೆದು ಕಾರ್ಯ ನಿರ್ವಹಿಸುತ್ತಿದೆ.