ನಾವು ನವ ಕಾಶ್ಮೀರ ನಿರ್ಮಿಸಬೇಕಿದೆ: `ಹೌಡಿ, ಮೋದಿ`ಗೂ ಮುನ್ನ ಸಂವಾದದಲ್ಲಿ ಪ್ರಧಾನಿ ಮೋದಿ
ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ರದ್ದುಪಡಿಸಲು ತೆಗೆದುಕೊಂಡ ದಿಟ್ಟ ನಿರ್ಧಾರಕ್ಕಾಗಿ ಕಾಶ್ಮೀರಿ ಪಂಡಿತರ ನಿಯೋಗ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದರು.
ಹೂಸ್ಟನ್: ಒಂದು ವಾರಗಳ ಕಾಲ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಶನಿವಾರ ಅಮೆರಿಕದ ಹೂಸ್ಟನ್‌ನಲ್ಲಿ ಕಾಶ್ಮೀರಿ ಪಂಡಿತರ ನಿಯೋಗವನ್ನು ಭೇಟಿಯಾಗಿ ಸಂವಾದ ನಡೆಸಿದರು.
ಸಂವಾದದಲ್ಲಿ ಕಾಶ್ಮೀರ ಪಂಡಿತರೊಬ್ಬರು ಪ್ರಧಾನಿ ಮೋದಿಯವರ ಕೈಗೆ ಮುತ್ತನ್ನಿಟ್ಟು 7 ಲಕ್ಷ ಕಾಶ್ಮೀರಿ ಪಂಡಿತರ ಪರವಾಗಿ ಧನ್ಯವಾದ ಅರ್ಪಿಸಿದರು. ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ರದ್ದುಪಡಿಸಲು ತೆಗೆದುಕೊಂಡ ದಿಟ್ಟ ನಿರ್ಧಾರಕ್ಕಾಗಿ ಕಾಶ್ಮೀರಿ ಪಂಡಿತರ ನಿಯೋಗ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದರು.
ಬಳಿಕ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಕಾಶ್ಮೀರಿ ಪಂಡಿತ್ ಪಿಎಂ ಸುರಿಂದರ್ ಕೌಲ್, ಕಳೆದ 70 ವರ್ಷಗಳಲ್ಲಿ ಕಾಶ್ಮೀರಿ ಪಂಡಿತರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಇದೀಗ ನೂತನ ಕಾಶ್ಮೀರ ನಿರ್ಮಿಸುವಲ್ಲಿ ಸರ್ಕಾರ ಕಾರ್ಯ ನಿರ್ವಹಿಸಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾಗಿ ಹೇಳಿದರು.
ಪಿಎಂ ಮೋದಿ ಅವರು ಬೋಹ್ರಾ ಮುಸ್ಲಿಮರ ನಿಯೋಗ ಮತ್ತು ಸಿಖ್ ಸಮುದಾಯದ ಸದಸ್ಯರ ನಿಯೋಗವನ್ನೂ ಸಹ ಹೂಸ್ಟನ್‌ನಲ್ಲಿ ಭೇಟಿಯಾದರು. ಸಿಖ್ ಸಮುದಾಯವು ಪ್ರಧಾನಿ ಮೋದಿ ಅವರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದು, 1984 ರ ಸಿಖ್ ನರಮೇಧದ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿತು.
ದೆಹಲಿ ವಿಮಾನ ನಿಲ್ದಾಣದ ಹೆಸರನ್ನು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುರುನಾನಕ್ ದೇವ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಬದಲಾಯಿಸಬೇಕು ಎಂದು ಇದೇ ಸಂದರ್ಭದಲ್ಲಿ ಸಿಖ್ ಸಮುದಾಯ ಒತ್ತಾಯಿಸಿತು.