ನವದೆಹಲಿ: ವಿಶ್ವದ ಖ್ಯಾತ ಮೆಸೆಂಜರ್ ಆಪ್ ವಾಟ್ಸ್ ಆಪ್ ಇನ್ಮುಂದೆ ಭಾರತದಲ್ಲಿ ಜನರಿಗೆ ಸಾಲ ಸೌಲಭ್ಯ ಸೇವೆ ಕೂಡ ಒದಗಿಸಲಿದೆ. ಇದಕ್ಕಾಗಿ ಕಂಪನಿಯು ಭಾರತೀಯ ಬ್ಯಾಂಕುಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಜೊತೆಗೆ ಕಡಿಮೆ ಆದಾಯದ ಕಾರ್ಮಿಕರಿಗಾಗಿಯೂ ಕೂಡ ಕಂಪನಿ ವಿಮೆ ಮತ್ತು ಪಿಂಚಣಿ ವ್ಯವಸ್ಥೆ ಕಲ್ಪಿಸಲಿದೆ.


COMMERCIAL BREAK
SCROLL TO CONTINUE READING

ಈ ಸೇವೆಗಳಿಗಾಗಿ ಫೇಸ್‌ಬುಕ್ ಮಾಲೀಕತ್ವದ ಕಂಪನಿ ವಾಟ್ಸಾಪ್, ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಜೊತೆ ಪಾರ್ಟ್ನರ್ ಶಿಪ್ ಮಾಡಿಕೊಂಡಿದೆ. ಪ್ರಸ್ತುತ, ವಾಟ್ಸಾಪ್ನ ಈ ಸೇವೆಯಡಿಯಲ್ಲಿ, ಗ್ರಾಮೀಣ ಪ್ರದೇಶದಲ್ಲಿ ವಿಮೆ ಮತ್ತು ಪಿಂಚಣಿ ಸೇವೆ ನೀಡಲಾಗುತ್ತಿದೆ ಎನ್ನಲಾಗಿದೆ.


ಈ ಕುರಿತು ಹೇಳಿಕೆ ನೀಡಿರುವ ವಾಟ್ಸ್ ಆಪ್ ಇಂಡಿಯಾ ಮುಖ್ಯಸ್ಥ ಅಭಿಜೀತ್ ಬೋಸ್, ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್ ಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಮತ್ತು ಅದರಲ್ಲೂ ವಿಶೇಷವಾಗಿ ಕಡಿಮೆ ಆದಾಯ ಇರುವ ಗ್ರಾಮೀಣ ಭಾಗದ ಜನರಿಗೆ ಬ್ಯಾಂಕಿಂಗ್ ಸೇವೆಯನ್ನು ಸುಲಭಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.


ಬ್ಯಾಂಕಿನ ಸಹಭಾಗಿತ್ವದಲ್ಲಿ, ಗ್ರಾಹಕರು ಸ್ವಯಂಚಾಲಿತ ಟೆಕ್ಸ್ಟ್ ಮೂಲಕ ಬ್ಯಾಂಕಿನೊಂದಿಗೆ ಸಂವಹನ ನಡೆಸಲು ಸಾಧಯ್ವಾಗಲಿದೆ. ಇದಕ್ಕಾಗಿ ನೀವು ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ಬ್ಯಾಂಕಿನಲ್ಲಿ ನೋಂದಾಯಿಸಿಕೊಳ್ಳಬೇಕು. ಇದರ ನಂತರ, ಗ್ರಾಹಕರು ತಮ್ಮ ಬ್ಯಾಂಕ್ ಬ್ಯಾಲೆನ್ಸ್‌ಗೆ ಸಂಬಂಧಿಸಿದ ಇತರ ಮಾಹಿತಿಯನ್ನು ಸಹ ವಾಟ್ಸಾಪ್‌ನಲ್ಲಿ ಪಡೆಯಲು ಸಾಧ್ಯವಾಗಲಿದೆ.


ಮುಂದಿನ ಎರಡು ವರ್ಷಗಳಲ್ಲಿ, ಬ್ಯಾಂಕುಗಳ ಸಹಯೋಗದೊಂದಿಗೆ ಕಡಿಮೆ ಆದಾಯದ ಕಾರ್ಮಿಕರಿಗೆ ವಿಮೆ, ಮೈಕ್ರೋ ಕ್ರೆಡಿಟ್ ಮತ್ತು ಪಿಂಚಣಿಯಂತಹ ಸೌಲಭ್ಯಗಳನ್ನು ಸರಳೀಕರಿಸುವುದು ಕಂಪನಿಯ ಗುರಿಯಾಗಿದೆ ಎಂದು ವಾಟ್ಸ್ ಆಪ್ ಇಂಡಿಯಾ ಮುಖ್ಯಸ್ಥರು ಹೇಳಿದ್ದಾರೆ. ಕಂಪನಿಯು ಪ್ರಾಥಮಿಕವಾಗಿ ಈ ಯೋಜನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಸಿದ್ಧತೆ ನಡೆಸಿದೆ ಎಂದೂ ಕೂಡ ಹೇಳಲಾಗಿದೆ


ವಾಟ್ಸಾಪ್ ಭಾರತದಲ್ಲಿ ಕಳೆದ ಸುಮಾರು ಎರಡು ವರ್ಷಗಳಿಂದ ಅಂದರೆ 2018 ರಿಂದ WhatsApp Payments ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಆದರೆ ಇದುವರೆಗೂ ಕಂಪನಿಯ ಈ ಯೋಜನೆಗೆ ಸರ್ಕಾರ ಅನುಮತಿ ನೀಡಿಲ್ಲ ಎಂಬುದು ಇಲ್ಲಿ ಗಮನಾರ್ಹವಾಗಿದೆ. 


ಇತ್ತೀಚೆಗಷ್ಟೇ ಫೇಸ್‌ಬುಕ್ ಬ್ರೆಜಿಲ್‌ನಲ್ಲಿ ತನ್ನ ವಾಟ್ಸಾಪ್ ಪೇಮೆಂಟ್ಸ್  ಸೇವೆಯನ್ನು ಆರಂಭಿಸಿದೆ. ಆದರೆ ಸೇವೆ ಆರಂಭಿಸಿದ ಕೆಲವೇ ಸಮಯದಲ್ಲಿ ಅದನ್ನು ಅಲ್ಲಿ ನಿಷೇಧಿಸಲಾಗಿದೆ. ಅಷ್ಟೇ ಅಲ್ಲ, ಕ್ರಿಪ್ಟೋಕರೆನ್ಸಿ ಲಿಬ್ರಾವನ್ನು ತರುವ ಫೇಸ್‌ಬುಕ್‌ನ ಕನಸು ಕೂಡ ಪ್ರಸ್ತುತ ಈಡೇರುತ್ತಿಲ್ಲ.


ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ  ಭಾರತದಲ್ಲಿ ವಾಟ್ಸಾಪ್ನ ಈ ಸೇವೆಯನ್ನು ಫೇಸ್ಬುಕ್ ಹೇಗೆ ಮುಂದುವರೆಸಿಕೊಂಡು ಹೋಗಲಿದೆ ಎಂಬುದನ್ನು ಕಾದುನೋಡಬೇಕು.  ಆದರೆ, ಭಾರತದಲ್ಲಿ ಆರಂಭಗೊಳ್ಳುತ್ತಿರುವ ಈ ಸೇವೆಯು ವಾಟ್ಸಾಪ್ ಪೇಮೆಂಟ್ಸ್ ಸೇವೆಗಿಂತ ಸಾಕಷ್ಟು ಭಿನ್ನವಾಗಿರುವುದರಿಂದ, ಕಂಪನಿಗೆ ಇದರಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂಬುದನ್ನು ನಿರೀಕ್ಷಿಸಬಹುದು.