ಕೆಲವು ಓಪಿಯಾಯ್ಡ್‌ಗಳು ಯಾಕೆ ಉಳಿದವುಗಳಿಂದ ಅಪಾಯಕಾರಿ?
ಓಪಿಯಾಯ್ಡ್ ವ್ಯಸನದ ಸಮಸ್ಯೆ ಈಗ ಅಮೆರಿಕಾ ಸಂಯುಕ್ತ ಸಂಸ್ಥಾನದಾದ್ಯಂತ ವ್ಯಾಪಿಸಿದೆ. ಅದರಲ್ಲೂ ಸಿಂಥೆಟಿಕ್ ಓಪಿಯಾಯ್ಡ್ ಬಳಕೆಯ ಪರಿಣಾಮವಾಗಿ, ಓಪಿಯಾಯ್ಡ್ ಮಿತಿಮೀರಿದ ಪ್ರಮಾಣದ ಕಾರಣದಿಂದ ಉಂಟಾಗುವ ಸಾವುಗಳನ್ನೂ ಹೆಚ್ಚಾಗುವಂತೆ ಮಾಡಿದೆ.
1999ರ ಬಳಿಕ, ಅಮೆರಿಕಾದಲ್ಲಿ ಮಿತಿ ಮೀರಿದ ಮಾದಕ ದ್ರವ್ಯ ಸೇವನೆಯಿಂದ 9,32,000 ಜನರು ಜೀವ ಕಳೆದುಕೊಂಡಿದ್ದಾರೆ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ ವರದಿ ಮಾಡಿದೆ. 2020 ಒಂದರಲ್ಲೇ ಬಹುತೇಕ ಒಂದು ಲಕ್ಷ ಜನರು ಡ್ರಗ್ ಓವರ್ ಡೋಸ್ ಕಾರಣದಿಂದ ಸಾವಿಗೀಡಾಗಿದ್ದರು.ಓವರ್ ಡೋಸ್ ಕಾರಣದಿಂದ ಸಾವು ಹೆಚ್ಚಾಗುವುದಕ್ಕೆ ಮೂಲ ಕಾರಣವೆಂದರೆ ಸಿಂಥೆಟಿಕ್ ಓಪಿಯಾಯ್ಡ್‌ಗಳು, ಅದರಲ್ಲೂ ಫೆಂಟಾನಿಲ್ ಎನ್ನಲಾಗಿದೆ.
ಕಳೆದ ಕೆಲ ವರ್ಷಗಳಲ್ಲಿ, ಓಪಿಯಾಯ್ಡ್‌ಗಳಿಗೆ ಸಂಬಂಧಿಸಿದಂತೆ ಓವರ್‌ಡೋಸ್ ಪ್ರಕರಣಗಳು ಹೆಚ್ಚುತ್ತಾ ಬಂದಿದ್ದು, 2020ರಲ್ಲಿ ಬಹುತೇಕ 69,000 ಸಾವುಗಳು ಸಂಭವಿಸಿದ್ದವು. ಸಿಂಥೆಟಿಕ್ ಓಪಿಯಾಯ್ಡ್ ಕಾರಣದಿಂದ ಇಷ್ಟೊಂದು ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು ಎನ್ನುವುದನ್ನು ಅನ್ವೇಷಿಸಬೇಕಿದೆ.
ಅಮೆರಿಕಾದ ಜಸ್ಟಿಸ್ / ಡ್ರಗ್ ಎನ್‌ಫೋರ್ಸ್‌ಮೆಂಟ್ ಅಡ್ಮಿನಿಸ್ಟ್ರೇಶನ್ ಪ್ರಕಾರ, ಫೆಂಟಾನಿಲ್ ಎನ್ನುವುದು ಒಂದು ಮಾನವ ನಿರ್ಮಿತ ಓಪಿಯಾಯ್ಡ್ ಆಗಿದ್ದು, ದೇಹದ ಮೇಲಿನ ಪರಿಣಾಮದಲ್ಲಿ ಮಾರ್ಫೀನ್ ನಿಂದ 100 ಪಟ್ಟು ಮತ್ತು ಹೆರಾಯಿನ್‌ನಿಂದ 50 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ.
ಫೆಂಟಾನಿಲ್ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದ್ದು, ಅದನ್ನು 1959ರಲ್ಲಿ ಸೃಷ್ಟಿಸಲಾಯಿತು.ಇದನ್ನು 1960ರ ದಶಕದಲ್ಲಿ ನೋವು ನಿವಾರಣೆಗಾಗಿ ಅಭಿದಮನಿ ಅರಿವಳಿಕೆಯಾಗಿ ಬಳಸಲಾಗುತ್ತಿತ್ತು.
ಅಮೆರಿಕಾ ಮತ್ತು ಇತರ ದೇಶಗಳಲ್ಲಿ ಫೆಂಟಾನಿಲ್ ಮತ್ತು ಇತರ ಸಿಂಥೆಟಿಕ್ ಓಪಿಯಾಯ್ಡ್‌ಗಳ ಓವರ್ ಡೋಸ್ ಹೆಚ್ಚಾಗುವುದಕ್ಕೆ ಪ್ರಮುಖ ಕಾರಣವೆಂದರೆ ಅವುಗಳ ಕಳ್ಳ ಸಾಗಾಣಿಕೆ. ಬಹುತೇಕ ಪ್ರಕರಣಗಳಲ್ಲಿ, ಹೆರಾಯಿನ್‌ನಂತೆ ಫೆಂಟಾನಿಲ್‌ನೊಡನೆ ಮಿಶ್ರವಾಗಿರುವ ಮಾದಕ ದ್ರವ್ಯ ಸೇವನೆಯ ಕಾರಣದಿಂದ ಓವರ್ ಡೋಸ್ ಸಂಭವಿಸುತ್ತದೆ. ಇದೊಂದು ಕಳವಳಕಾರಿ ವಿಚಾರವಾಗಿದ್ದು, ತಕ್ಷಣವೇ ಚಿಕಿತ್ಸೆ ನೀಡಬೇಕಾಗುತ್ತದೆ.
ಒಂದು ವೇಳೆ ಯಾರಿಗಾದರೂ ಫೆಂಟಾನಿಲ್ ಉಪಸ್ಥಿತಿಯ ಕುರಿತು ಅರಿವಿರದಿದ್ದರೆ, ಅವರು ತಿಳಿಯದೆ ಅಪಾಯಕಾರಿ ಪ್ರಮಾಣದಲ್ಲಿ ಡ್ರಗ್ಸ್ ಸೇವಿಸುವ ಅಪಾಯವಿರುತ್ತದೆ. ಫೆಂಟಾನಿಲ್ ದೇಹವನ್ನು ಪ್ರವೇಶಿಸಿದ ಬಳಿಕ, ಅದು ನೇರವಾಗಿ ಮೆದುಳಿಗೆ ಪ್ರವೇಶಿಸಿ, ನಿರ್ದಿಷ್ಟ ಓಪಿಯಾಯ್ಡ್ ರಿಸೆಪ್ಟರ್ ಆದ, ಭಾವನೆ ಮತ್ತು ನೋವನ್ನು ನಿಯಂತ್ರಿಸುವ ಎಂಯು ಓಪ್ಟಿಯಾಯ್ಡ್ ರಿಸೆಪ್ಟರ್ ತಲುಪುತ್ತದೆ. ಈ ಕಾರಣದಿಂದಲೇ ಫೆಂಟಾನಿಲ್ ಮತ್ತು ಇತರ ಡ್ರಗ್‌ಗಳು ನೋವು ನಿವಾರಣೆಯಲ್ಲಿ ಅತ್ಯಂತ ಪ್ರಭಾವಿಯಾಗಿವೆ.
ಸಿಂಥೆಟಿಕ್ ಓಪಿಯಾಯ್ಡ್ ಯಾಕೆ ಇಷ್ಟೊಂದು ಅಪಾಯಕಾರಿ?
ಸಿಂಥೆಟಿಕ್ ಓಪಿಯಾಯ್ಡ್‌ಗಳು, ಅದರಲ್ಲೂ ವಿಶೇಷವಾಗಿ ಫೆಂಟಾನಿಲ್ ಯಾಕೆ ನೈಸರ್ಗಿಕ ಓಪಿಯಾಯ್ಡ್‌ಗಳಿಂದ ಹೆಚ್ಚು ಅಪಾಯಕಾರಿ ಎಂದರೆ, ಅವುಗಳಿಗೆ ಎಂಯು ಓಪಿಯಾಯ್ಡ್ ರಿಸೆಪ್ಟರ್‌ಗಳಿಗೆ ಸೇರಿಕೊಳ್ಳುವ ಸಾಮರ್ಥ್ಯ ಹೆಚ್ಚಿದೆ.ಒಂದು ಬಾರಿ ಓಪಿಯಾಯ್ಡ್ ಮೆದುಳನ್ನು ಪ್ರವೇಶಿಸಿ, ಓಪಿಯಾಯ್ಡ್ ರಿಸೆಪ್ಟರ್‌ಗಳನ್ನು ಸೇರಿದಾಗ, ಅವುಗಳ ನಡುವಿನ ಬಾಂಧವ್ಯದ ಪರಿಣಾಮವಾಗಿ ಅರೆನಿದ್ರಾವಸ್ಥೆ, ದೇಹದ ಉಸಿರಾಟದಲ್ಲಿ ಅಸ್ತವ್ಯಸ್ತತೆ ಉಂಟುಮಾಡಿ, ಪ್ರಜ್ಞೆ ತಪ್ಪುವಂತೆ ಮಾಡಬಲ್ಲದು.
2021ರಲ್ಲಿ 'ನೇಚರ್' ಪತ್ರಿಕೆಯಲ್ಲಿ ಒಂದು ಅಧ್ಯಯನ ಪ್ರಕಟವಾಗಿತ್ತು. ಅದು ಫೆಂಟಾನಿಲ್‌ಗೆ ಮೆದುಳಿನಲ್ಲಿ ಬೇರೆ ಬೇರೆ ರೀತಿಯ ಬೈಂಡಿಂಗ್ ಮೋಡ್ ಉಂಟುಮಾಡುವ ಸಾಮರ್ಥ್ಯವಿದೆ ಎಂದು ಸಾಬೀತುಪಡಿಸಿತ್ತು.ಆದ್ದರಿಂದಲೇ ಅತ್ಯಂತ ಸಣ್ಣ ಪ್ರಮಾಣದ ಫೆಂಟಾನಿಲ್ ಸಹ ಅತ್ಯಂತ ಅಪಾಯಕಾರಿಯಾಗಬಲ್ಲದು.ಆದರೆ ಸಂಶೋಧಕರು ಮೆದುಳಿನಲ್ಲಿ ಫೆಂಟಾನಿಲ್ ಉಂಟುಮಾಡುವ ಪರಿಣಾಮಗಳನ್ನು ಸರಿಯಾಗಿ ಅರಿಯಲು ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ ಎಂದು ಅಭಿಪ್ರಾಯ ಪಡುತ್ತಾರೆ.
ಸಂಶೋಧಕರ ಅಧ್ಯಯನದ ಪ್ರಕಾರ, ಫೆಂಟಾನಿಲ್ ನೀಡುವ ಸಂಕೇತಗಳು ಮತ್ತು ಎಂಯು ಓಪಿಯಾಯ್ಡ್ ರಿಸೆಪ್ಟರ್‌ಗಳ ಜೊತೆ ಅದರ ಸಂವಹನ ಯಾವ ರೀತಿ ನೋವಿನಿಂದ ನಿವಾರಣೆ ನೀಡುತ್ತದೆ ಎನ್ನುವುದನ್ನು ಇನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳಲಾಗಿಲ್ಲ.ಈ ಅಧ್ಯಯನ, ಫೆಂಟಾನಿಲ್ ಮತ್ತು ಅದರ ಉತ್ಪನ್ನಗಳು ಮೋರ್ಫಿನನ್ ಸಂಯುಕ್ತಗಳ ರೀತಿಯಲ್ಲೇ ಎಂಯು ರಿಸೆಪ್ಟರ್‌ಗಳನ್ನು ಜಾಗೃತಗೊಳಿಸಬಹುದು, ಆದರೆ ಈ ಸಂವಹನದ ಹಿಂದಿರುವ ರಚನಾತ್ಮಕ ಕಾರ್ಯವಿಧಾನ ಮಾತ್ರ ಇಂದಿಗೂ ತಿಳಿದು ಬಂದಿಲ್ಲ.
-ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.