ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಇಡೀ ವಿಶ್ವ ಹುಡುಕುತ್ತಿರುವುದೇನು?
ಮಹಿಳೆಯರು ಪುರುಷರಿಗಿಂತ ಎಲ್ಲ ಕ್ಷೇತ್ರಗಳಲ್ಲೂ ಕೀಳು, ಅಶಕ್ತರು ಎಂಬ ತಪ್ಪು ಕಲ್ಪನೆಗಳನ್ನು ಪೂರ್ಣ ಅಳಿಸಿ ಹಾಕಿ ಲಿಂಗ ಸಮಾನತೆಯ ಮನೋಭಾವ ಬೆಳೆಸಬೇಕಿದೆ.
ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಎಲ್ಲಿ ನೋಡಿದರೂ ಮಹಿಳೆ, ಮಹಿಳಾ ಸಬಲೀಕರಣ, ಲೈಂಗಿಕ ಕಿರುಕುಳ, ಮಹಿಳಾ ಶಿಕ್ಷಣ, ಮಹಿಳಾ ಶೋಷಣೆ, ಮಹಿಳಾ ಉದ್ಯೋಗ... ಹೀಗೆ ಬಹಳಷ್ಟು ವಿಚಾರಗಳು ಚರ್ಚೆಯಾಗುತ್ತಿವೆ.
ಆದರೆ, ಇದೆಲ್ಲಕ್ಕಿಂತ ಹೆಚ್ಚು ಚರ್ಚೆಯಲ್ಲಿರುವುದು 'ಲಿಂಗ ಸಮಾನತೆ'. ಹೌದು, ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಗೂಗಲ್'ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವಿಷಯವೆಂದರೆ, 'ಲಿಂಗ ಸಮಾನತೆ'.
ಮನುಷ್ಯ ಜೀವಿಗಳ ನಡುವೆ ಅಸಮಾನತೆ ತಪ್ಪಿಸಿ, ಸಮಾನತೆ ಸಹಬಾಳ್ವೆಯ ಜೀವನ ನಡೆಸಲು ಅಂತರ ಸಂಬಂಧ, ವಿಚಾರ ವಿನಿಮಯ ಬಹಳ ಮುಖ್ಯವಾಗುತ್ತದೆ. ಹೆಣ್ಣು ಮಕ್ಕಳ ಬಗ್ಗೆ ಆಚರಣೆಯಲ್ಲಿರುವ ಕೀಳರಿಮೆಯನ್ನು ಅಳಿಸಿಹಾಕಿ ಹೆಣ್ಣು ಮಕ್ಕಳು ಹುಟ್ಟಿ ಬೆಳೆಯುವ ವಿವಿಧ ಹಂತಗಳಲ್ಲಿ ಮಾನವೀಯ ವಾತಾವರಣವನ್ನು ಸೃಷಿಸಿ, ಮಹಿಳೆಯರು ಪುರುಷರಿಗಿಂತ ಎಲ್ಲ ಕ್ಷೇತ್ರಗಳಲ್ಲೂ ಕೀಳು, ಅಶಕ್ತರು ಎಂಬ ತಪ್ಪು ಕಲ್ಪನೆಗಳನ್ನು ಪೂರ್ಣ ಅಳಿಸಿ ಹಾಕಿ ಲಿಂಗ ಸಮಾನತೆಯ ಮನೋಭಾವ ಬೆಳೆಸಬೇಕಿದೆ.
ಅಷ್ಟೇ ಅಲ್ಲ, ಮಹಿಳೆಯ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸಿ, ಮಹಿಳೆಯರಲ್ಲಿ ಇರುವ ಅಪೂರ್ವ ಶಕ್ತಿ ಸಾಮರ್ಥ್ಯ, ಸೃಜನಶೀಲ ಯೋಚನೆಗಳನ್ನು ಅಭಿವೃದ್ದಿಗೊಳಿಸುವ ಮತ್ತು ಅವು ಇಡೀ ಸಮಾಜಕ್ಕೆ ಬಳಕೆಯಾಗುವಂತೆ ವ್ಯವಸ್ಥೆಗೊಳಿಸಿ, ಆತ್ಮವಿಶ್ವಾಸವನ್ನು ಗಳಿಸಲು ಸಹಕರಿಸಬೇಕಿದೆ. ಆಕೆ ಎಲ್ಲದರಲ್ಲಿಯೂ ಶಕ್ತಳು. ಆದರೆ, ಅದಕ್ಕೆ ಈ ಸಮಾಜ ದಾರಿ ಮಾಡಿಕೊಡಬೇಕಿದೆ ಅಷ್ಟೇ.
ಹಾಗಾಗಿ, ಲಿಂಗ ಸಮಾನತೆ ವಿಷಯವು ಈ ಸಂದರ್ಭದಲ್ಲಿ ಅಂತರ್ಜಾಲದಲ್ಲಿ ಹಿಂದೆಂದಿಗಿಂತಲೂ ಅತಿ ಹೆಚ್ಚು ಹುಡುಕಲ್ಪಟ್ಟಿದೆ. ಲಿಂಗ ಸಮಾನತೆಯ ಪ್ರಮುಖ ವಿಷಯಗಳ ಪೈಕಿ, ಕಳೆದ ವರ್ಷದಲ್ಲಿ ಲೈಂಗಿಕ ಕಿರುಕುಳವು ಕಳೆದ 12 ವರ್ಷಗಳಲ್ಲಿ ಹುದುಕಿದ್ದಕ್ಕಿಂತ ಶೇ.99ರಷ್ಟು ಹೆಚ್ಚಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರತಿಶತ ಪ್ರಮಾಣ ಅತಿ ಹೆಚ್ಚಾಗಿದೆ.