ಕರ್ನಾಟಕ ಚುನಾವಣೋತ್ತರ ಸಮೀಕ್ಷೆ ಕುರಿತ ಒಂದು ತಾರ್ಕಿಕ ವಿಶ್ಲೇಷಣೆ

    

Last Updated : May 13, 2018, 02:40 PM IST
ಕರ್ನಾಟಕ ಚುನಾವಣೋತ್ತರ ಸಮೀಕ್ಷೆ ಕುರಿತ ಒಂದು ತಾರ್ಕಿಕ ವಿಶ್ಲೇಷಣೆ title=

ಇಡಿ ರಾಷ್ಟ್ರಾಧ್ಯಂತ ತೀವ್ರ ಕೂತುಹಲ ಕೆರಳಿಸಿದ್ದ  ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೊನೆಗೂ ತೆರೆ ಬಿದ್ದಿದೆ ಇನ್ನು ಫಲಿತಾಂಶವೊಂದೇ ಬಾಕಿ. ಆದರೆ ಈ ಈಗ ಈ ಫಲಿತಾಂಶದ ವಿಚಾರವಾಗಿ ಹಲವಾರು ಟಿವಿ ಮಾಧ್ಯಮಗಳು ಸ್ಪಷ್ಟ ಚಿತ್ರಣ ನೀಡುವಲ್ಲಿ ವಿಫಲವಾಗಿದೆ. 

ಪ್ರಮುಖವಾಗಿ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಬಿಂಬಿಸಿದ್ದ ಸಮೀಕ್ಷೆಗಳು ಈಗ ಚುನಾವಣೋತ್ತರ ಸಮೀಕ್ಷೆಯಲ್ಲಿ  ಬಹುತೇಕ ಮಾಧ್ಯಮಗಳು ಅತಂತ್ರ ಎಂದು ತೀರ್ಪು ನೀಡಿವೆ. ಅಲ್ಲದೆ  ಬಿಜೆಪಿಯು ಅತಿ ದೊಡ್ಡ  ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಅವು  ಬಿಂಬಿಸುತ್ತಿವೆ. ಈ ಎಲ್ಲ ಸಮೀಕ್ಷೆಗಳ ಸತ್ಯತೆ ಕುರಿತು ಪ್ರಗತಿಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಮಂಡ್ಯದ ವಾಸು ಎಚ್.ವಿ ಯವರು ಸಮಗ್ರವಾಗಿ ವಿಶ್ಲೇಷಿಸಿದ್ದಾರೆ.  

ಒಂದಕ್ಕಿಂತ ಹೆಚ್ಚು ಚುನಾವಣೋತ್ತರ ಸಮೀಕ್ಷೆ ಹೊರಬಂದು, ಅವುಗಳ ನಡುವೆ ದೊಡ್ಡ ಅಂತರ ಇರುವಾಗ ನಾವು ಏನಾದರೂ ಒಂದು ಅಭಿಪ್ರಾಯಕ್ಕೆ ಬರಬೇಕೆಂದರೆ ಅದಕ್ಕೊಂದು ತರ್ಕ ಇರಬೇಕು. ಅಂತಹ ತರ್ಕದ ಆಧಾರದ ಮೇಲೆ ಈ ಕೆಳಕಂಡ ಅಭಿಪ್ರಾಯ ನನ್ನದು. ಇದಕ್ಕೆ ಹಿರಿಯ ಗೆಳೆಯ ಶಿವಸುಂದರ್ ಅವರು ನೀಡಿದ ವಿವರ ಮತ್ತು ವಿಶ್ಲೇಷಣೆಗಳ ಜೊತೆಗೆ ಇತರ ಮಾಹಿತಿಗಳು ಆಧಾರ.

ಕಾಂಗ್ರೆಸ್‍ಗೆ 110ಕ್ಕಿಂತ ಹೆಚ್ಚು ಸೀಟುಗಳು ಬರುತ್ತವೆ.

ಹೇಗೆ ಮತ್ತು ಏಕೆ?

1. ಚುನಾವಣಾಪೂರ್ವ ಸಮೀಕ್ಷೆ ನಡೆಸಿದುದರಲ್ಲಿ ಅತ್ಯಂತ ಹೆಚ್ಚು ವಿಶ್ವಾಸಾರ್ಹವಾಗಿದ್ಧವು ಎರಡು ಸಮೀಕ್ಷೆಗಳು- ಒಂದು CSDS-Loknithi-Jainನದ್ದು. ಅವರ ಪ್ರಕಾರ ಏಪ್ರಿಲ್‍ನಲ್ಲಿ 90+ ಇದ್ದ ಕಾಂಗ್ರೆಸ್ ಮೇನಲ್ಲಿ 100+ ಆಗಿದೆ. ಅಂದರೆ ಮೋದಿಯವರ ಸತತ ರ್ಯಾಲಿಗಳ ನಡೆಯುತ್ತಿರುವಾಗ ಈ ಹೆಚ್ಚಳವಾಗಿದೆ. (CSDS ಏಕೆ ವಿಶ್ವಾಸಾರ್ಹ ಎಂಬುದು ಗೊತ್ತಿದ್ದವರಿಗೆ ಗೊತ್ತು)
ಎರಡು-ಮೂರು ರಾಜದೀಪ್ ಸರ್ದೇಸಾಯಿ ನೇತೃತ್ವದ ಚಾನೆಲ್‍ದು: ಸ್ವತಃ ಅವರು ಬಿಜೆಪಿಯ ಪರವಾಗಿಲ್ಲವಾದರೂ, 2014ರ ಲೋಕಸಭೆ & 2017ರ ಯು.ಪಿ. ಚುನಾವಣೆಯಲ್ಲಿ ಸ್ಪಷ್ಟವಾಗಿ ಬಿಜೆಪಿ ಗೆಲ್ಲುತ್ತದೆ ಎಂಬ ಸಮೀಕ್ಷೆ ಮುಂದಿಟ್ಟಿದ್ದರು.
ಈಗ ಅವರ ಪ್ರಕಾರ ಕಾಂಗ್ರೆಸ್‍ಗೆ 106-118. ಜೊತೆಗೆ ಅವರ ಚುನಾವಣೋತ್ತರ ಸಮೀಕ್ಷೆಯ ಬೇಸ್ ಸಹಾ ಬಹಳ (70000+) ದೊಡ್ಡದು.

2. ಸಿ-ಫೋರ್ ಕಾಂಗ್ರೆಸ್ ಪರ ಇದ್ದಂತೆ ಕಂಡುಬರುತ್ತಿದೆಯಾದರೂ ಅದರ ಸಮೀಕ್ಷೆಯ ಬೇಸ್ (27000) ಬಹಳ ದೊಡ್ಡದು ಮತ್ತು ಅವರು ಕಾಂಗ್ರೆಸ್‍ಗೆ ಕೊಟ್ಟಿರುವ ವೋಟ್ ಷೇರ್ 5% ಕಡಿಮೆ ತೆಗೆದುಕೊಂಡರೂ ಅದು ಕಾಂಗ್ರೆಸ್‍ನ ಪರ ಇದೆ.

3. ಈ ಸಾರಿಯ ಮತದಾನದ ಪ್ರಮಾಣ, ಸ್ವಾತಂತ್ರ್ಯೋತ್ತರ ಭಾರತದಲ್ಲೇ ಅತ್ಯಂತ ಹೆಚ್ಚು. (73% ಎನ್ನುವುದೇ ನಿಜವಾದರೆ) ಇಷ್ಟೊಂದು ಹೆಚ್ಚಳವಾಗಲು ಅಲೆ ಇರಬೇಕು, ಇಲ್ಲವೇ ಕಳೆದ ಸಾರಿ ಆದ ರೀತಿ ಮಹಿಳೆಯರ ಮತಪ್ರಮಾಣ ಹೆಚ್ಚಾಗಿರಬೇಕು.

4. ಮೋದಿಯವರ ಅಲೆ ಹೆಚ್ಚಾಗಿದ್ದರೆ ನಗರದ ಮತ ಪ್ರಮಾಣ ಹೆಚ್ಚಾಗಿರಬೇಕು. ಮಿಕ್ಕ ಕಡೆ ಜಿಲ್ಲಾ ಪ್ರಮಾಣ ಮಾತ್ರ ಸಿಗುತ್ತಿರುವುದರಿಂದ ಬೆಂಗಳೂರನ್ನು ಒಂದು ಸೂಚನೆ ಎಂದುಕೊಳ್ಳುವುದಾದರೆ, ಅದು ಕಳೆದ ಸಾರಿಗಿಂತ 10% ಕಡಿಮೆ. ಎಂದರೆ ಮೋದಿಯವರಿಂದ ಪ್ರಭಾವಿತರಾಗಬಹುದಾದವರಿಗೆ ಮತಗಟ್ಟೆಗೆ ಬರಬೇಕು ಎಂದೆನಿಸಿಲ್ಲ.

5. ಹಾಗಾದರೆ ಇಷ್ಟೊಂದು ಹೆಚ್ಚಿನ ಮತಪ್ರಮಾಣ ಆಗಿರುವುದು ಗ್ರಾಮೀಣ ಭಾಗ, ಮಹಿಳೆಯರು, ದಲಿತ-ಹಿಂದುಳಿದ ಸಮುದಾಯ ಮತ್ತು ಮುಸ್ಲಿಮರದ್ದಾಗಿರಬೇಕು. ಈ ರೀತಿ ಆದಾಗ ಹಿಂದೆ 1978ರಲ್ಲಿ (71.9% ಇದುವರೆಗಿನ ಅತೀ ಹೆಚ್ಚು) ದೇವರಾಜ ಅರಸರ ನೇತೃತ್ವದಲ್ಲಿ ಕಾಂಗ್ರೆಸ್ ಗೆದ್ದಿತ್ತು. ಈ ಸಾರಿಯೂ ಹಾಗೆ ಆಗುವ ರೀತಿಯಲ್ಲಿ ನಮ್ಮ ಸಾಮಾಜಿಕ-ರಾಜಕೀಯ ಸಂದರ್ಭವಿದೆ. ಇಂಡಿಯಾ ಟುಡೇ ಪ್ರಕಾರ ದಲಿತರು 48% ಮತ್ತು ಮುಸ್ಲಿಮರು 80% ಕಾಂಗ್ರೆಸ್ಸನ್ನು ಬೆಂಬಲಿಸಿದ್ದಾರೆ. (ವಾಸ್ತವದಲ್ಲಿ ಇನ್ನೂ ಹೆಚ್ಚಿರಬಹುದೆನಿಸುತ್ತದೆ. ಮತ್ತು ಈ ಸಮುದಾಯಗಳು ಹೆಚ್ಚು ವೋಟ್ ಮಾಡುತ್ತವೆ) ಕಳೆದ ಸಾರಿ 40%ಗಿಂತ ಹೆಚ್ಚು ಮುಸ್ಲಿಂ ಮತದಾರರಿರುವ 15 ಕ್ಷೇತ್ರಗಳಲ್ಲಿ ಬಿಜೆಪಿ 6 ಕಡೆ ಗೆದ್ದಿತ್ತು! ಈ ಸಾರಿ ಮೋದಿಯವರ ಮತ್ತು ಅವರ ಪರಿವಾರದ ಇತರರು ಹೆಚ್ಚು ಮುಸ್ಲಿಂ ಧ್ರುವೀಕರಣಕ್ಕೆ ಕಾರಣರಾಗಿರುವ ಸಾಧ್ಯತೆ ಇದೆ.

6. ಸಾಮಾನ್ಯವಾಗಿ 70% ಮತದಾರರು ಒಂದೇ ಪಕ್ಷಕ್ಕೆ ಮತ ಹಾಕುತ್ತಿರುತ್ತಾರೆ. ಹಾಗಾಗಿ ನಾವು ಗುರುತಿಸಬೇಕಾದ್ದು ಬದಲಾಗುತ್ತಿರುವ ಟ್ರೆಂಡ್‍ಅನ್ನು. ಅದಕ್ಕೆ ನಮಗೆ ಲಭ್ಯವಿರುವುದು CSDSದು ಮಾತ್ರ. ಅದು (ಏಪ್ರಿಲ್-ಮೇ) ಕಾಂಗ್ರೆಸ್‍ನ ಪರವಾಗಿದೆ.

ಒಂದು ವೇಳೆ ತರ್ಕದ ಆಧಾರದ ಮೇಲೆ ಇದನ್ನು ಯಾರಾದರೂ ಪ್ರಶ್ನಿಸುವುದಾದರೆ ಚರ್ಚೆ ಮಾಡೋಣ. ಈ ತರ್ಕ ತಪ್ಪಿದ್ದರೆ ಸರಿ ಮಾಡಿಕೊಳ್ಳೋಣ. ಆದರೆ ಟುಡೇಸ್ ಚಾಣಕ್ಯ-ಸಿ.ವೋಟರ್ ಹೀಗೆ ಹೇಳುತ್ತೆ ಅಂತ ತರ್ಕ ಮುಂದಿಟ್ಟರೆ ಪ್ರಯೋಜನವಿಲ್ಲ.
ಇದನ್ನು ಮೀರಿ ಚುನಾವಣಾ ಫಲಿತಾಂಶ ಬಂದರೆ,

1.ತರ್ಕಕ್ಕೆ ತಕ್ಕಂತೆ ಚುನಾವಣೆ ನಡೆಯಲಿಲ್ಲ. (ನಡೆಯಬೇಕೆಂದೇನೂ ಇಲ್ಲ).

2. ಇವಿಎಂ ಬಗ್ಗೆ ಸಂದೇಹ ಪಡಬೇಕಾಗುತ್ತದೆ.

3. ಸಮೀಕ್ಷೆಯ ಅಂಕಿ-ಅಂಶಗಳಲ್ಲಿ ತಪ್ಪಿರಬೇಕು ಅಥವಾ ತರ್ಕದ ವಿಧಾನದಲ್ಲಿ ತಪ್ಪಿರಬೇಕು.

ಇದರರ್ಥ ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಇದ್ದೇನೆಂದಲ್ಲ. ಚುನಾವಣಾ ವಿಶ್ಲೇಷಣೆಯನ್ನು ವೈಜ್ಞಾನಿಕವಾಗಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡೋಣ ಎಂದಷ್ಟೇ. ನಾಳೆ ಯಾರು ಗೆದ್ದರೂ ವಿರೋಧ ಪಕ್ಷವಾಗಿ ಕೆಲಸ ಮಾಡೋಣ.

Trending News