ಶ್ರೀರಾಮುಲು ಉಮೇದುವಾರಿಕೆ ಅನರ್ಹಗೊಳಿಸುವಂತೆ ಚುನಾವಣಾ ಆಯೋಗಕ್ಕೆ‌‌ ದೂರು

     

Last Updated : May 11, 2018, 01:44 PM IST
ಶ್ರೀರಾಮುಲು ಉಮೇದುವಾರಿಕೆ ಅನರ್ಹಗೊಳಿಸುವಂತೆ ಚುನಾವಣಾ ಆಯೋಗಕ್ಕೆ‌‌ ದೂರು title=

ನವದೆಹಲಿ: ಗಾಲಿ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮ ಗಣಿಗಾರಿಕೆ ಪ್ರಕರಣ ಕುರಿತು ನ್ಯಾಯಾಧೀಶರಿಗೆ ಲಂಚದ ಆಮಿಷ ಒಡ್ಡಿರುವ ಬಾದಾಮಿ‌ ಮತ್ತು ಮೊಳಕಾಲ್ಮೂರು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಅವರ ನಾಮಪತ್ರವನ್ನು ಅನರ್ಹಗೊಳಿಸಬೇಕೆಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಶುಕ್ರವಾರ ದೆಹಲಿಯ ಕೇಂದ್ರ ಚುನಾವಣಾ ಆಯೋಗಕ್ಕೆ ತೆರಳಿದ ಕಪಿಲ್ ಸಿಬಾಲ್, ಮೋತಿಲಾಲ್ ಓರಾ, ಮುಕುಲ್ ವಾಸ್ನಿಕ್, ರಣದೀಪ್ ಸುರ್ಜೆವಾಲಾ, ಆರ್.ಪಿ.ಎನ್. ಸಿಂಗ್ ಮತ್ತು ಪಿ.ಎಲ್. ಪುನಿಯಾ ಅವರನ್ನೊಳಗೊಂಡ‌ ಕಾಂಗ್ರೆಸ್ ನಾಯಕರ ನಿಯೋಗವು ಶ್ರೀರಾಮುಲು ಅವರ ನಾಮಪತ್ರ ಅನರ್ಹಗೊಳಿಸುವಂತೆ ಕೇಂದ್ರ ಚುನಾವಣಾ ಆಯುಕ್ತರನ್ನು ಆಗ್ರಹಿಸಿತು.

ಮಾಧ್ಯಮಗಳ ವರದಿಯ ಪ್ರಕಾರ ಸ್ವತಃ ಶ್ರೀರಾಮುಲು ಲಂಚದ ಆಮಿಷ ಒಡ್ಡಲು ಪ್ರಯತ್ನಿಸಿದ್ದಾರೆ. ಓಬಳಿಪುರಂ ಕಂಪನಿಯ ಪರವಾಗಿ ನ್ಯಾಯಾಧೀಶರನ್ನೇ ಭ್ರಷ್ಟರನ್ನಾಗಿಸಲು ಮುಂದಾಗಿದ್ದಾರೆ. ದೃಶ್ಯಾವಳಿಗಳು ಸ್ಪಷ್ಟವಾಗಿದ್ದು ಅವು ಗಂಭೀರ ಸ್ವರೂಪದ ಅಪರಾಧವಾಗಿರುವುದರಿಂದ‌ ಶ್ರೀರಾಮುಲು ಅವರ ನಾಮಪತ್ರವನ್ನು ಅನರ್ಹಗೊಳಿಸಬೇಕೆಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದರು.

ಇದಲ್ಲದೆ ತಕ್ಷಣವೇ ಶ್ರೀರಾಮುಲು ವಿರುದ್ಧ ಎಫ್ ಐ ಆರ್ ದಾಖಲಿಸಬೇಕು. ಶ್ರೀರಾಮುಲು ಲಂಚದ ಆಮಿಷ ನೀಡುತ್ತಿರುವ ದೃಶ್ಯವಾಳಿಗಳ ಪ್ರಸಾರಕ್ಕೆ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಸೂಚಿಸಬೇಕು. ಬಿಜೆಪಿಯ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಒಡೆತನದ ಟಿವಿ ವಾಹಿನಿ ಪ್ರಸಾರ ಮಾಡುತ್ತಿರುವ ಆಕ್ಷೇಪಾರ್ಹ ಪ್ರೋಮೋಗೆ ತಡೆಯಾಜ್ಞೆ ನೀಡಬೇಕು. ಹಾಗೂ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಧ್ವಜ ಹಾರಿಸಲಾಗಿದೆ ಎಂದು ಸುಳ್ಳು ಸುದ್ದಿ ಪಸರಿಸುತ್ತಿರುವ ಸೋಷಿಯಲ್ ಮೀಡಿಯಾವನ್ನು ನಿಯಂತ್ರಿಸಬೇಕು ಎಂದು ಕಾಂಗ್ರೆಸ್ ನಾಯಕರು ಚುನಾವಣಾ ಆಯುಕ್ತರನ್ನು ಒತ್ತಾಯಿಸಿದ್ದಾರೆ.

Trending News