ಅಮಿತ್ ಶಾ ಏಟಿಗೆ ತಿರುಗೇಟು ನೀಡಿದ ಎಚ್.ಡಿ. ಕುಮಾರಸ್ವಾಮಿ

ರಾಜ್ಯದಲ್ಲಿ ಯಾರಿಗೂ ಬಹುಮತ ಬಂದಿಲ್ಲ. ಬಿಜೆಪಿಗೂ ಕೂಡ. ಹಾಗಾಗಿಯೇ ಜಾತ್ಯತೀತ ತತ್ವದಡಿ ಜೆಡಿಎಸ್​-ಕಾಂಗ್ರೆಸ್​ ಒಂದಾಗಿವೆ. ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಕೂಟ ಅಪವಿತ್ರ ಎಂಬುದು ಅಮಿತ್ ಷಾ ಅವರ ವಾದ. ಹಾಗಾದರೆ ಪವಿತ್ರವಾದದ್ದು ಯಾವುದು @ಅಮಿತ್ ಶಾ?- ಎಚ್ ಡಿಕೆ ಪ್ರಶ್ನೆ

Last Updated : May 22, 2018, 11:26 AM IST
ಅಮಿತ್ ಶಾ ಏಟಿಗೆ ತಿರುಗೇಟು ನೀಡಿದ ಎಚ್.ಡಿ. ಕುಮಾರಸ್ವಾಮಿ title=

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಂದ ನಂತರ ಸರ್ಕಾರ ರಚಿಸಿದ್ದ ಬಿಜೆಪಿ ಬಹುಮತ ಸಾಧಿಸಲು ವಿಫಲವಾದ ಬಳಿಕ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೋಮವಾರ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿದ್ದಾರೆ. ಇದೊಂದು ಅಪವಿತ್ರ ಮೈತ್ರಿ ಎಂದು ಹರಿಹೈದರಲ್ಲದೆ, ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಯಾವ ಕಾರಣಕ್ಕೆ ಸಂಭ್ರಮಿಸುತ್ತಿವೆ ಎಂದು ಅವರು ಪ್ರಶ್ನಿಸಿದ್ದರು. ಈ ರೀತಿ ಸಾಲು ಸಾಲು ಪ್ರಶ್ನೆಗಳನ್ನು ಕೇಳುವ ಮೂಲಕ ಕಾಂಗ್ರೆಸ್ ಜೆಡಿಎಸ್ ಮೈತ್ರಿಯ ಬಗ್ಗೆ ವಾಗ್ದಾಳಿ ನಡೆಸಿದ್ದ ಅಮಿತ್ ಶಾ ಅವರಿಗೆ ನಿಯೋಜಿತ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ನೀಡಿದ್ದಾರೆ.

ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಯಾವ ಕಾರಣಕ್ಕೆ ಸಂಭ್ರಮಿಸುತ್ತಿವೆ ಎಂದು ಅಮಿತ್ ಶಾ ಅವರು ಇಂದು ಪ್ರಶ್ನಿಸಿದ್ದಾರೆ. 
ರಾಜ್ಯದಲ್ಲಿ ಜಾತ್ಯತೀತ ಸರ್ಕಾರವೊಂದನ್ನು ರಚಿಸುತ್ತಿರುವ ಕಾರಣಕ್ಕೆ, ಕೋಮುವಾದಿ ಪಕ್ಷವೊಂದನ್ನು ಅಧಿಕಾರದಿಂದ ದೂರವಿಟ್ಟ ಕಾರಣಕ್ಕಾಗಿ ನಾವು ಸಂಭ್ರಮಿಸುತ್ತಿದ್ದೇವೆ ಅಮಿತ್ ಶಾ ಅವರೇ ಎಂದು ಕುಮಾರಸ್ವಾಮಿ ಉತ್ತರಿಸಿದ್ದಾರೆ.

ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಕೂಟ ಅಪವಿತ್ರ ಎಂಬುದು ಅಮಿತ್ ಶಾ ಅವರ ವಾದ. ಹಾಗಾದರೆ ಪವಿತ್ರವಾದದ್ದು ಯಾವುದು @ಅಮಿತ್ ಶಾ? ನಮ್ಮ ಪಕ್ಷಗಳ ಚಿಹ್ನೆಯಿಂದ ಆಯ್ಕೆಯಾದವರನ್ನು ಖರೀದಿಸಲು ಮುಂದಾಗಿದ್ದು, ಅವರ ಮೂಲಕ ರಾಜೀನಾಮೆ ಕೊಡಿಸಲು ಪ್ರಯತ್ನಿಸಿದ್ದು ಪವಿತ್ರ ಕಾರ್ಯವೇ? ಎಂದು ಎಚ್ ಡಿಕೆ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಯಾರಿಗೂ ಬಹುಮತ ಬಂದಿಲ್ಲ. ಬಿಜೆಪಿಗೂ ಕೂಡ. ಹಾಗಾಗಿಯೇ ಜಾತ್ಯತೀತ ತತ್ವದಡಿ ಜೆಡಿಎಸ್​-ಕಾಂಗ್ರೆಸ್​ ಒಂದಾಗಿವೆ. ಈ ಮೈತ್ರಿಗೆ ಒಂದು ನೆಲೆ ಇದೆ. ಸರ್ವರ ಹಿತ ಕಾಯುವ, ಎಲ್ಲರೊಂದಿಗೆ ಪ್ರಗತಿ ಕಡೆಗೆ ಹೆಜ್ಜೆ ಹಾಕುವುದು ಈ ಮೈತ್ರಿಯ ಮೂಲ ನೆಲೆ. ಅದನ್ನು ಅಪವಿತ್ರ ಎನ್ನುತ್ತಿರುವ ನಿಮ್ಮ ಅಭಿಪ್ರಾಯ ಅಪವಿತ್ರ @ಅಮಿತ್ ಶಾ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸಂವಿಧಾನದ ಅಡಿಯಲ್ಲಿ ಬಹುಮತ ಇರುವವರು ಸರ್ಕಾರ ರಚಿಸುತ್ತಾರೆ. ಏಕೈಕ ದೊಡ್ಡ ಪಕ್ಷವೆಂದು ಬಹುಮತವಿಲ್ಲದಿದ್ದರೂ ಸರ್ಕಾರ ಮಾಡಲಾಗದು. ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಕೂಟ 2.25 ಕೋಟಿ ಮತ ಪಡೆದಿದೆ. ಬಿಜೆಪಿ ಪಡೆದಿರುವುದು 1.31 ಕೋಟಿ ಮತ. ಯಾರಿಗೆ ಬಹುಮತ ಇದೆ? ಎಂಬುದನ್ನು @ಅಮಿತ್ ಶಾ ಅರಿಯಲಿ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

Trending News