ಕಾಂಗ್ರೆಸ್ ಬಾಹ್ಯ ಬೆಂಬಲದಿಂದ ಜೆಡಿಎಸ್ ನಾಯಕತ್ವದ ಸರ್ಕಾರ ರಚನೆ: ಸಿದ್ದರಾಮಯ್ಯ

ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂದಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. 

Last Updated : May 15, 2018, 06:47 PM IST
ಕಾಂಗ್ರೆಸ್ ಬಾಹ್ಯ ಬೆಂಬಲದಿಂದ ಜೆಡಿಎಸ್ ನಾಯಕತ್ವದ ಸರ್ಕಾರ ರಚನೆ: ಸಿದ್ದರಾಮಯ್ಯ title=

ಬೆಂಗಳೂರು: ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂದಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಇಂದು ಸಂಜೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಿಯೋಗ ರಾಜಭವನಕ್ಕೆ ತೆರಳಿ ಸರಕಾರ ರಚನೆ ಬಗ್ಗೆ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹಾಗು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ನಡೆಸಿದ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ ಅಖಿಲ ಭಾರತ ಕಾಂಗ್ರೆಸ್ ಪಕ್ಷ, ಜೆಡಿಎಸ್ ಪಕ್ಷ ಸರ್ಕಾರ ರಚಿಸಲು ಸಂಪೂರ್ಣ ಬೆಂಬಲ ನೀಡಲು ತೀರ್ಮಾನ ಮಾಡಿದೆ. ಈಗ ನಮ್ಮ ತೀರ್ಮಾನವನ್ನು ರಾಜ್ಯಪಾಲರಿಗೆ ಪತ್ರದ ಮೂಲಕ ತಿಳಿಸಿದ್ದೇವೆ. ನಮ್ಮ ಪಕ್ಷದ ತೀರ್ಮಾನವನ್ನು ಪತ್ರದ ಮೂಲಕ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡರಿಗೂ ತಿಳಿಸಿದ್ದೇವೆ. ಅಂತೆಯೇ ನಾವು ಕಾಂಗ್ರೆಸ್ ಬೆಂಬಲವನ್ನು ಸ್ವೀಕರಿಸಿದ್ದು, ಸರ್ಕಾರ ರಚಿಸಲು ಒಪ್ಪಿದ್ದೇವೆ ಎಂದು ಜೆಡಿಎಸ್ ರಾಜಾಧ್ಯಕ್ಷರಾದ ಕುಮಾರಸ್ವಾಮಿ ಅವರು ಸಹ ಹೇಳಿದ್ದಾರೆ ಎಂದು ತಿಳಿಸಿದರು. 

ಬಿಜೆಪಿ ಮುಕ್ತ ಕರ್ನಾಟಕ ಎಂಬ ಉದ್ದೇಶದಿಂದ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿಗೆ ಮುಂದಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಸಂಖ್ಯಾಬಲದ ಮೇಲೆ ನಿಂತಿದೆ. ಕಾನೂನು ಬಹಳ ಸ್ಪಷ್ಟವಾಗಿದೆ. ಸರ್ಕಾರ ರಚಿಸಲು 113 ಮ್ಯಾಜಿಕ್ ನಂಬರ್, ಕಾಂಗ್ರೆಸ್-78, ಜೆಡಿಎಸ್-38 ಮತ್ತು ಇಬ್ಬರು ಪಕ್ಷೇತರರು ಸೇರಿ ನಾವು 118 ಸಂಖ್ಯಾ ಬಲವನ್ನು ಹೊಂದಿದ್ದೇವೆ. ಅಲ್ಲದೆ, ರಾಜ್ಯಪಾಲರು ಚುನಾವಣಾ ಆಯೋಗದಿಂದ ಪಟ್ಟಿ ತರಿಸಿಕೊಂಡು ಪರಿಶೀಲಿಸಿದ ನಂತರ, ಸಂಖ್ಯಾ ಬಲ ಹೊಂದಿರುವ ನಮಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಲಿದ್ದಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು, ಇಂದು ಘೋಷಣೆಯಾದ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ನಾಯಕರು ಚರ್ಚಿಸಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರಿಗೆ ಬೆಂಬಲ ಸೂಚಿಸುವ ಪತ್ರ ನೀಡಿದ ಹಿನ್ನೆಲೆಯಲ್ಲಿ ಅದಕ್ಕೆ ಒಪ್ಪಿ, ನಾವು ಸರ್ಕಾರ ರಚಿಸಲು ರಾಜ್ಯಪಾಲರಿಗೆ ಪತ್ರ ನೀಡಿ ಮನವಿ ಮಾಡಿದ್ದೇವೆ. ರಾಜ್ಯಪಾಲರು ಚುನಾವಣಾ ಆಯೋಗದ ಮಾಹಿತಿ ಬಂದ ನಂತರ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ ಎಂದರು.

ಆದರೆ ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೂ ಸಹ ರಾಜ್ಯಪಾಲರನ್ನು ಭೇಟಿ ಮಾಡಿದ್ದು, ಬಿಜೆಪಿ ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹಾಗಾಗಿ ತಾವೇ ಸರ್ಕಾರ ರಚಿಸಲಿದ್ದು, ಒಂದು ವಾರಗಳ ಕಾಲಾವಕಾಶ ಕೇಳಿರುವುದಾಗಿ ಹೇಳಿದ್ದಾರೆ. ವರದಿಗಳ ಪ್ರಕಾರ, ಕಾಂಗ್ರೆಸ್ ಪಕ್ಷದ ಲಿಂಗಾಯತ ಶಾಸಕರನ್ನು ಪಕ್ಷಕ್ಕೆ ಸೆಳೆಯುವ ಕಾರ್ಯದಲ್ಲಿ ಬಿಜೆಪಿ ನಾಯಕರು ಬ್ಯುಸಿ ಆಗಿದ್ದಾರೆ ಎನ್ನಲಾಗಿದೆ. 

Trending News