Live Update ಕರ್ನಾಟಕ ಚುನಾವಣೆ ಫಲಿತಾಂಶ; ಸರ್ಕಾರ ರಚನೆಗೆ ಒಂದು ವಾರ ಕಾಲಾವಕಾಶ ಕೇಳಿದ ಬಿಜೆಪಿ

ಕರ್ನಾಟಕ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ, ರಾಜ್ಯದಲ್ಲಿ ಸರ್ಕಾರ ರಚನೆಗೆ ಒಂದು ವಾರಗಳ ಕಾಲ ಕಾಲಾವಕಾಶ ನೀಡುವಂತೆ ರಾಜ್ಯಪಾಲರಲ್ಲಿ ಮನವಿ ಮಾಡಿದೆ.

Last Updated : May 15, 2018, 05:40 PM IST
Live Update ಕರ್ನಾಟಕ ಚುನಾವಣೆ ಫಲಿತಾಂಶ; ಸರ್ಕಾರ ರಚನೆಗೆ ಒಂದು ವಾರ ಕಾಲಾವಕಾಶ ಕೇಳಿದ ಬಿಜೆಪಿ title=

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಾ ಮತ ಎಣಿಕೆ ಆರಂಭವಾಗಿದ್ದು, ಜನಾದೇಶ ಪಡೆಯುವ ಕಾಲ ಸನ್ನಿಹಿತವಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಮೇ 12ರಂದು ಮತದಾನ ನಡೆದಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಲ್ಲದೆ ಸರಿ ಸುಮಾರು 28ಕ್ಕೂ ಅಧಿಕ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಿದೆ.

ಕ್ಷಣಕ್ಷಣದ ಕ್ಷೇತ್ರಾವಾರು ಚುನಾವಣಾ ಫಲಿತಾಂಶ 

ಈ ಬಾರಿಯ ಚುನಾವಣೆಯಲ್ಲಿ ಮತದಾನಕ್ಕಾಗಿ  ಸುಮಾರು 58,546 ಮತಗಟ್ಟೆಗಳನ್ನು ನಿರ್ಮಿಸಲಾಗಿತ್ತು. ಅಲ್ಲದೆ  154 ಸಾಮಾನ್ಯ ವೀಕ್ಷಕರು, 136 ವೆಚ್ಚ ವೀಕ್ಷಕರು, 34 ಪೋಲಿಸ್ ವೀಕ್ಷಕರು 10,000 ಅತಿ ಸೂಕ್ಷ್ಮ ವೀಕ್ಷಕರು 3.2 ಲಕ್ಷ ಚುನಾವಣಾ ಸಿಬ್ಬಂದಿಗಳು ಚುನಾವಣಾ ಯಶಸ್ಸಿಗೆ ಕಾರ್ಯನಿರ್ವಹಿಸಿದ್ದರು. ಇದೇ ಮೊದಲ ಬಾರಿಗೆ ವಿವಿಪ್ಯಾಟ್ ಅನ್ನು ಚುನಾವಣೆಯಲ್ಲಿ ಬಳಸಲಾಗಿತ್ತು.

ಕರ್ನಾಟಕ ಚುನಾವಣೆ: ಪಕ್ಷಾವಾರು ಫಲಿತಾಂಶ

ಮತದಾನದ ನಂತರ ಸುದ್ದಿ ವಾಹಿನಿಗಳು ಪ್ರಕಟಿಸಿದ್ದ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದ್ದವು. ಅಲ್ಲದೆ ಜೆಡಿಎಸ್ ಪಕ್ಷವು ಕಿಂಗ್ ಮೇಕರ್ ಆಗಿ ಹೊರಹೊಮ್ಮಲಿದೆ ಎಂದು ತಿಳಿಸಿದ್ದವು. ಇದೀಗ ಅದರಂತೆಯೇ ಕರ್ನಾಟಕ ವಿಧಾನಸಭೆಯ 222 ಸ್ಥಾನಗಳಲ್ಲಿ  222 ಕ್ಷೇತ್ರಗಳ ಪೈಕಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38 ಮತ್ತು ಇತರರು 2 ಸ್ಥಾನಗಳನ್ನು ಗಳಿಸಿದ್ದಾರೆ.

ಜೆಡಿಎಸ್ ಜೊತೆ ಮೈತ್ರಿ

ರಾಜ್ಯದಲ್ಲಿ ಯಾವ ಪಕ್ಷವೂ ಪೂರ್ಣ ಬಹುಮತ ಪಡೆಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಜೊತೆ ಮೈತ್ರಿ ಹೊಂದಲು ಕಸರತ್ತು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ 4 ಗಂಟೆಗೆ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಅಜಾದ್ ಮತ್ತು ಅಹಮದ್ ಪಟೇಲ್ ನೇತೃತ್ವದ ನಿಯೋಗ ಇಂದು ಸಂಜೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಲಿದ್ದು, ಮೈತ್ರಿ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ, ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿಯೂ ಕಾಂಗ್ರೆಸ್ ಹೇಳಿದೆ. 

ಜೆಡಿಎಸ್ ಜೊತೆ ಮೈತ್ರಿ ಸಾಧ್ಯತೆ ಇದೆ : ಅಶೋಕ್ ಗೆಹ್ಲೋಟ್

ಈ ಸಂದರ್ಭದಲ್ಲಿ ಮಾತನಾಡಿರುವ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್, ಜೆಡಿಎಸ್ ಜತೆಗೆ ಮೈತ್ರಿ ಹೊಂದುವ ಸಾಧ್ಯತೆ ಇದ್ದು, ರಾಜ್ಯದ ಜನತೆಯ ಒಳಿತಿನ ಪರವಾಗಿ ನಿರ್ಧಾರ ಕೈಗೊಳ್ಳಲಾಗುವುದು. ಹಾಗೆಯೇ ದಲಿತ ಮುಖ್ಯಮಂತ್ರಿ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲು ಪಕ್ಷ ಸಿದ್ಧವಾಗಿದೆ ಎಂದಿದ್ದಾರೆ.

ಆದರೀಗ ಬಿಜೆಪಿ ನಾಯಕರು ಕರ್ನಾಟಕದಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹಾಗಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ. ಈ ನಿಟ್ಟಿನಲ್ಲಿ ರಾಜ್ಯಪಾಲರನ್ನು ಬಿಜೆಪಿ ನಾಯಕರು ಭೇಟಿ ಮಾಡಿದ್ದು, ಸರ್ಕಾರ ರಚನೆ ಮಾಡಲು ಒಂದು ವಾರಗಳ ಕಾಲಾವಕಾಶ ಕೋರಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Trending News