ಪ್ರಚಾರಕ್ಕಾಗಿ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಮೋದಿ: ಟ್ವೀಟ್ ಮೂಲಕ ಕಾಲೆಳೆದ ಸಿದ್ದು

ಮೇ 1ರಿಂದ ರಾಜ್ಯ ಚುನಾವಣಾ ಕಣದಲ್ಲಿ ಅಬ್ಬರಿಸಲು ಸಜ್ಜಾಗಿರುವ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಸ್ವಾಗತ ಕೋರಿದ್ದಾರೆ.

Last Updated : May 1, 2018, 09:17 AM IST
ಪ್ರಚಾರಕ್ಕಾಗಿ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಮೋದಿ: ಟ್ವೀಟ್ ಮೂಲಕ ಕಾಲೆಳೆದ ಸಿದ್ದು title=

ಬೆಂಗಳೂರು: ಭರ್ಜರಿ ಚುನಾವಣಾ ಪ್ರಚಾರಕ್ಕಾಗಿ ಇಂದಿನಿಂದ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ ಮೋದಿಗೆ ಟ್ವೀಟ್ ಮೂಲಕ ಸ್ವಾಗತ ಕೋರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಆತ್ಮೀಯ @ ನರೇಂದ್ರಮೋದಿ ಅವರೇ, ನೀವು ಕರ್ನಾಟಕಕ್ಕೆ ಭೇಟಿ ನೀಡುತ್ತಿರುವುದಾಗಿ ಕೇಳಿದೆ. ನಾವು ನಮ್ಮ ರಾಜ್ಯಕ್ಕೆ ನಿಮ್ಮನ್ನು ಸ್ವಾಗತಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ, 'ನೀವು ಇಲ್ಲಿಗೆ ಬಂದಾಗ ಕೆಲವು ವಿಚಾರಗಳ ಬಗ್ಗೆ ನಿಲುವು ಸ್ಪಷ್ಟಪಡಿಸಬೇಕು ಎಂದು ಕನ್ನಡಿಗರು ಬಯಸುತ್ತಿದ್ದಾರೆ. ದಯವಿಟ್ಟು ಉತ್ತರಿಸಿ' ಎಂದು #answerMaadiModi ಎಂಬ ಹ್ಯಾಷ್‌ಟ್ಯಾಗ್‌ ನಡಿ ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಪ್ರಧಾನಿ ಮೋದಿ ಕಾಲೆಳೆದಿದ್ದಾರೆ.

ಪ್ರಶ್ನೆಗಳ ಸುರಿಮಳೆ ಗೈದ ಸಿದ್ದು;
* ಜಿ. ಜನಾರ್ಧನ ರೆಡ್ಡಿ ಅವರೂ ನಿಮ್ಮ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆಯೇ? ಬಿಜೆಪಿ 10 ರಿಂದ 15ರಷ್ಟು ಸೀಟುಗಳನ್ನು ಗೆಲ್ಲಲು ನೆರವಾಗುತ್ತಾರೆ ಎಂಬ ನಿರೀಕ್ಷೆಯಿಂದ ಅವರ ಕುಟುಂಬಸ್ಥರು ಹಾಗೂ ಗೆಳೆಯರು ಸೇರಿದಂತೆ ಎಂಟು ಮಂದಿಗೆ ಟಿಕೆಟ್‌ ನೀಡಿದ್ದೀರಿ. ತದನಂತರ, ಭ್ರಷ್ಟಾಚಾರದ ಬಗ್ಗೆ ನೀವು ಉಪನ್ಯಾಸ ಮಾಡುತ್ತೀರಿ. ದಯವಿಟ್ಟು ಈ ಬೂಟಾಟಿಕೆ ಕೊನೆಗೊಳ್ಳಿ. ಕನ್ನಡಿಗರು ತಮ್ಮ ಕಿವಿಗಳಲ್ಲಿ ಕಮಲ ಇಟ್ಟುಕೊಂಡಿಲ್ಲ.

* ಮೊದಲಿಗೆ ತಾವು ಕಳಂಕಿತ ಬಿಎಸ್ವೈ ಅವರನ್ನು ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದ್ದೀರಿ. ಈಗ ನಿಮ್ಮ ರ್ಯಾಲಿಯಲ್ಲಿ ನೀವು ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲು ಬಯಸುತ್ತಿಲ್ಲವೆಂದು ಮಾಧ್ಯಮ ವರದಿ ಮಾಡುತ್ತಿವೆ!
ಯಡಿಯೂರಪ್ಪ ಇನ್ನೂ ನಿಮ್ಮ ಮುಖ್ಯ ಅಭ್ಯರ್ಥಿಯೇ ಎಂದು ಕರ್ನಾಟಕ ತಿಳಿಯಬೇಕು?

* ಅತ್ಯಾಚಾರ ಆರೋಪಿಗಳಿಗೆ ಹಾಗೂ ವಿಧಾನಸಭೆಯಲ್ಲಿ ಅಶ್ಲೀಲಚಿತ್ರಗಳನ್ನು ವೀಕ್ಷಿಸಿದ ಶಾಸಕರಿಗೆ ಕರ್ನಾಟಕದಲ್ಲಿ ಟಿಕೆಟ್‌ ನೀಡಿದ್ದೀರಿ. 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಬಿಜೆಪಿ ಶಾಸಕರಿಗೆ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ ಅವರು ರಕ್ಷಣೆ ನೀಡುತ್ತಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಿಮ್ಮ ಪಕ್ಷದ ಶಾಸಕರು ಮಗುವಿನ ಮೇಲೆ ಅತ್ಯಾಚಾರ ನಡೆಸಿದವರ ಪರ ವಹಿಸುತ್ತಾರೆ. ಇಷ್ಟೆಲ್ಲ ಆಗಿಯೂ ನಿಮ್ಮ ಪಕ್ಷವು ಕರ್ನಾಟಕದ ಅತ್ಯಾಚಾರ ಪ್ರಕರಣಗಳನ್ನು ರಾಜಕೀಯಗೊಳಿಸುವಂತಹ ಜಾಹೀರಾತುಗಳನ್ನು ನೀಡುತ್ತಿದೆಯಲ್ಲವೇ?

* ಮೊದಲಿಗೆ, ನೀವು ಜನರಿಗೆ 15 ಲಕ್ಷ ನೀಡುವುದಾಗಿ ಭರವಸೆ ನೀಡಿದ್ದೀರಿ, ನಂತರ ಶಾ ಇದನ್ನು ಚುನಾವಣಾ ಜುಮ್ಲಾ ಎಂದು ಕರೆಯುತ್ತಾರೆ. ನೀವು ಉದ್ಯೋಗಗಳಿಗೆ ಭರವಸೆ ನೀಡಿದ್ದೀರಿ, ಆದರೆ ನಂತರ ಯುವಕರನ್ನು ಪಕೋಡಗಳನ್ನು ಮಾರಾಟ ಮಾಡಲು ಸಲಹೆ ನೀಡಿದ್ದೀರಿ. ನೋಟುರದ್ಧತಿಯು ಕಪ್ಪು ಹಣವನ್ನು ಕೊನೆಗೊಳಿಸುತ್ತದೆ ಎಂದು ನೀವು ಹೇಳಿದ್ದೀರಿ, ಆದರೆ ಇದು ಸಾಮಾನ್ಯ ಜನರಿಗೆ ಮಾತ್ರ ದುಃಖವನ್ನು ತಂದಿತು. 
ತದನಂತರ ನೀವು ಇಲ್ಲಿಗೆ ಬಂದು ನಿಜವಾದ ಅಭಿವೃದ್ಧಿಯನ್ನು ಲಾಲಿಪಾಪ್ ಎಂದು ಕರೆಯುತ್ತೀರಾ?

ಹೀಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದು ಪ್ರಶ್ನೆಗಳನ್ನು ಕೇಳುವ ಮೂಲಕ ಅವರ ಕಾಲೆಳೆದಿದ್ದಾರೆ.

Trending News