ಸಿದ್ದರಾಮಯ್ಯ ಪಕ್ಷದಲ್ಲಿದ್ದರೆ ಕಾಂಗ್ರೆಸ್ಗೆ ಗೆಲುವಿಲ್ಲ: ಕೆ.ಬಿ.ಕೋಳಿವಾಡ

ಸಿದ್ದರಾಮಯ್ಯನಲ್ಲಿ ಕಾಂಗ್ರೆಸ್ ರಕ್ತವಿಲ್ಲ, ಈ ಮನುಷ್ಯನನ್ನು ಕಾಂಗ್ರೆಸ್‌ನಲ್ಲಿ ಉಳಿಸಿಕೊಳ್ಳಬಾರದು ಎಂದು ಕೆ.ಬಿ.ಕೋಳಿವಾಡ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Last Updated : May 16, 2018, 03:29 PM IST
ಸಿದ್ದರಾಮಯ್ಯ ಪಕ್ಷದಲ್ಲಿದ್ದರೆ ಕಾಂಗ್ರೆಸ್ಗೆ ಗೆಲುವಿಲ್ಲ: ಕೆ.ಬಿ.ಕೋಳಿವಾಡ title=

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಅವರೇ ನೇರ ಕಾರಣ. ಸಿದ್ದರಾಮಯ್ಯನಲ್ಲಿ ಕಾಂಗ್ರೆಸ್ ರಕ್ತವಿಲ್ಲ, ಈ ಮನುಷ್ಯನನ್ನು ಕಾಂಗ್ರೆಸ್‌ನಲ್ಲಿ ಉಳಿಸಿಕೊಳ್ಳಬಾರದು ಎಂದು ಕೆ.ಬಿ.ಕೋಳಿವಾಡ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. 

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ಪಕ್ಷಗಳು ಒಂದಾಗಿ ಸರ್ಕಾರ ರಚನೆ ಮಾಡಬೇಕು. ಆದರೆ, ಈ ಮನುಷ್ಯ ಸಿದ್ದರಾಮಯ್ಯ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ಬಿಡುವುದಿಲ್ಲ. ಹೀನಾಯವಾಗಿ ಚಾಮುಂಡೇಶ್ವರಿ ಸೋತು ಬಂದಿದ್ದಾನೆ. ಬಾದಾಮಿಯಲ್ಲಿ ಕೆಲವೇ ಅಂತರಗಳಲ್ಲಿ ಗೆದ್ದು ಬಂದಿದ್ದಾನೆ. ಸಿದ್ದರಾಮಯ್ಯಗೆ ಯಾವುದೇ ಸ್ಥಾನ ಕೊಡಬೇಡಿ ಎಂದು ನಾನೇ ಖುದ್ದಾಗಿ ರಾಹುಲ್ ಗಾಂಧಿ ಅವರಿಗೆ ಹೇಳುತ್ತೇವೆ" ಎಂದು ಕೆ.ಬಿ.ಕೋಳಿವಾಡ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ನನ್ನ ಎದುರು ಬಚ್ಚಾ. ನನಗಿಂತ 13 ವರ್ಷ ಚಿಕ್ಕವನು. ಕಾಂಗ್ರೆಸ್​ನ ರಕ್ತ ಸಿದ್ದರಾಮಯ್ಯರಲ್ಲಿ ಇಲ್ಲ. ಆದರೆ, ನನ್ನ ಹನಿ‌ ಹನಿ ರಕ್ತ ಕೂಡ ಕಾಂಗ್ರೆಸ್. ಯಾವುದೇ ಕಾರಣಕ್ಕೂ ‌ನಾನು ಕಾಂಗ್ರೆಸ್ ಬಿಡುವುದಿಲ್ಲ. ಕಾಂಗ್ರೆಸ್ ನಲ್ಲಿ ಯಾವುದೇ ಸಾಮಾನ್ಯ ಸ್ಥಾನ ಕೊಟ್ಟರೂ ನಿಭಾಯಿಸೋಕೆ ಸಿದ್ದ. ಆದರೆ, ಸಿದ್ದರಾಮಯ್ಯ ನೇತೃತ್ವದಲ್ಲಿ ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆಗೆ ಹೋಗಬಾರದು. ಇವರ ಬದಲು ಪರಮೇಶ್ವರ್ ನೇತೃತ್ವದಲ್ಲಿ ಚುನಾವಣೆಗೆ ಹೋಗಬೇಕು ಎಂದು ಕೋಳಿವಾಡ ಒತ್ತಾಯಿಸಿದ್ದಾರೆ. 

ಈ ಹಿಂದೆ ಜಿ. ಪರಮೇಶ್ವರ್ ಸೋಲಿಗೆ ಇವನೇ ಕಾರಣ. ಕಳೆದ ಬಾರಿ ಇನಾಮದಾರ್ ಹಾಗೂ ನನ್ನನ್ನು ಸೊಲೀಸೋಕೆ ಇವನು ಪ್ರಯತ್ನ ಪಟ್ಟ. ಈಗ ನನ್ನನೇ ಮರೆತು ಕೆಪಿಜೆಪಿ ಅಭ್ಯರ್ಥಿ ಆರ್.ಶಂಕರ್ ಗೆ ಸಪೋರ್ಟ್ ಮಾಡಿ ಆತನನ್ನು ಗೆಲ್ಲಿಸಿದ್ದಾನೆ. ಸಿದ್ದರಾಮಯ್ಯ ಅವರನ್ನು ಕೆಪಿಸಿಸಿ ಅಧ್ಯಕ್ಷನಾಗಿ ಮಾಡಿದ್ರೆ ಕಾಂಗ್ರೆಸ್ ಉಳಿಯುವುದಿಲ್ಲ. ಪರಮೇಶ್ವರ್, ಡಿ.ಕೆ. ಶಿವಕುಮಾರ್ ಅಥವಾ ಲಿಂಗಾಯಿತ ನಾಯಕರಲ್ಲೊಬ್ಬರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲಿ ಎಂದು ಕೋಳಿವಾಡ ಆಕ್ರೋಶ ವ್ಯಕ್ತಪಡಿಸಿದರು. 

ಒಟ್ಟಾರೆ, ಇದೀಗ ಅಧಿಕಾರ ಕಳೆದುಕೊಂಡ ಸಿದ್ದರಾಮಯ್ಯ ಅವರ ಬಗ್ಗೆ ಕೆಲವು ಕಾಂಗ್ರೆಸ್ ನಾಯಕರು ತುಚ್ಚವಾಗಿ ಮಾತನಾಡುತ್ತಿರುವುದು ಹಲವು ಅನುಮಾನಗಳಿಗೆ ಎದೆ ಮಾಡಿಕೊಟ್ಟಿದೆ. 

Trending News