ಕುಮಾರಸ್ವಾಮಿ ಮಾತ್ರ ದೆಹಲಿಗೆ ಬರಲಿ; ಕಾಂಗ್ರೆಸ್ ನಾಯಕರು ಬೇಡ?

ಇಂದು ಹೈಕಮಾಂಡ್ ಭೇಟಿಗೆ ದೆಹಲಿಗೆ ಹೊರಟಿದ್ದ ಕೈ ನಾಯಕರಿಗೆ ಬಾರದಂತೆ ಹೈಕಮಾಂಡ್ ಸೂಚನೆ.  

Last Updated : May 21, 2018, 11:07 AM IST
ಕುಮಾರಸ್ವಾಮಿ ಮಾತ್ರ ದೆಹಲಿಗೆ ಬರಲಿ; ಕಾಂಗ್ರೆಸ್ ನಾಯಕರು ಬೇಡ? title=

ಬೆಂಗಳೂರು: ಕರ್ನಾಟಕದಲ್ಲಿ  ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಗೆ ಸಿದ್ದತೆಗಳು ಸಾಗಿರುವ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನಕ್ಕೆ ಹಗ್ಗಾ-ಜಗ್ಗಾಟ ಪ್ರಾರಂಭವಾಗಿದೆ. ಸಚಿವ ಸ್ಥಾನ ಲಾಭಿಗಾಗಿ ಸೋಮವಾರ ದೆಹಲಿಗೆ ತೆರಳಲು ಮುಂದಾಗಿದ್ದ ಕೆಲ ಕೈ ನಾಯಕರಿಗೆ ದೆಹಲಿಗೆ ಬರೋದು ಬೇಡ ಎಂಬ ಸಂದೇಶ ಹೈಕಮಾಂಡ್ ನಿಂದ ರವಾನೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಹಿತದೃಷ್ಟಿಯಿಂದ ಸಮನ್ವಯತೆ, ಬಾಂಧವ್ಯ ಮುಖ್ಯ. ಹೀಗಾಗಿ ಇಂದು ದೆಹಲಿಗೆ ಆಗಮಿಸುತ್ತಿರುವ ಹೆಚ್.ಡಿ. ಕುಮಾರಸ್ವಾಮಿ ಅವರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಬಹುಮತ ಸಾಬೀತಾದ ಬಳಿಕ ಕಾಂಗ್ರೆಸ್ ನಾಯಕರು ದೆಹಲಿಗೆ ಬರುವಂತೆ ಹೈಕಮಾಂಡ್ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ಕುಮಾರಸ್ವಾಮಿ ಜತೆ ಯಾವ ಕಾಂಗ್ರೆಸ್ ನಾಯಕರೂ ದೆಹಲಿಗೆ ತೆರಳುತ್ತಿಲ್ಲ.

ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೊದಲು, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಸೋಮವಾರ 2:30 ಕ್ಕೆ ದೆಹಲಿಗೆ ಆಗಮಿಸಲ್ಲಿದ್ದಾರೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಪ್ರಮಾಣವಚನ ಸಮಾರಂಭಕ್ಕೆ ಆಗಮಿಸುವಂತೆ ಆಮಂತ್ರಣ ನೀಡಲು ಹೆಚ್.ಡಿ.ಕೆ ದೆಹಲಿಗೆ ಆಗಮಿಸುತ್ತಿದ್ದು, ಇಂದು ಮಧ್ಯಾಹ್ನ 03:30ಕ್ಕೆ ದೆಹಲಿಯ ತುಘಲಕ್ ಲೈನ್ ನಲ್ಲಿರುವ ಮನೆ ನಂ. 12 ರಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಆಮಂತ್ರಣ ನೀಡಲಿದ್ದಾರೆ. ನಂತರ ನಂ 10, ಜನ್ ಪಥ್ ನಲ್ಲಿರುವ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ನಿವಾಸಕ್ಕೆ ಭೇಟಿ ನೀಡಿ ಸೋನಿಯಾ ಅವರನ್ನೂ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಳು ಬೆಂಗಳೂರಿಗೆ ಬರಲು ಆಹ್ವಾನಿಸಲಿದ್ದಾರೆ.

Trending News